ಚಿತ್ತಾಪುರ : ತಾಲೂಕಿನ ಹಳಕರ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಕೇಳುವವರಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಗೋಡೆ ಬಿರುಕು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಹನ್ನೆರಡು ತರಗತಿ ಕೋಣೆಗಳ ಗೋಡೆ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಛಾವಣಿಯ ಕಾಂಕ್ರಿಟ್ ಕಳಚಿ ಬೀಳುತ್ತಿದೆ. ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಅಪಾಯ ಮೂಡಿಸಿವೆ.
ಹಳೆಯ ಶಾಲಾ ಕಟ್ಟಡ ಮಕ್ಕಳ ಜೀವ ನುಂಗಲು ಹವಣಿಸುತ್ತಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಬಿಸಿಯೂಟದ ವಾಸನೆ ಹಿಡಿದು ಶಾಲೆಗೆ ಹಂದಿಗಳ ಹಿಂಡು ಶಾಲೆಗೆ ಬರುತ್ತಿವೆ. ಕಿಟಕಿ, ಬಾಗಿಲು, ಮೇಜು, ತಿಜೋರಿ ಪೀಠೋಪಕರಣಗಳು ಓಬೇರಾಯನ ಕಾಲದ ಕಥೆ ಹೇಳುತ್ತಿವೆ.
ಮಕ್ಕಳ ಪಾಠ ಪ್ರವಚನಗಳು ಭಯದಲ್ಲೇ ನಡೆಯುತ್ತಿವೆ. ನೂರಾರು ಬಡ ಮಕ್ಕಳು ಪ್ರಾಣ ಭೀತಿಯಲ್ಲಿ ಶಾಲೆಗೆ ಕಾಲಿಡುತ್ತಿದ್ದಾರೆ.
ಹಲವು ಬಾರಿ ಈ ಕುರಿತು ಗಮನಕ್ಕೆ ತಂದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಈ ಕಟ್ಟಡ ನೆಲಸಮ ಮಾಡಿ ಹೊಸ ಶಾಲೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.