Advertisement

ಕಮಲ ಕೋಟೆಗೆ ಕವಿದ ಕಾರ್ಮೋಡ

06:09 PM Mar 23, 2021 | Team Udayavani |

ವಾಡಿ : ಕಮ್ಯೂನಿಸ್ಟ್‌ರು ಮತ್ತು ಕಾಂಗ್ರೆಸ್ಸಿಗರ ಹಿಡಿತದಲ್ಲಿದ್ದ ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಪಕ್ಷ ಕಟ್ಟಲು ಸಹಪಾಠಿ ಗೆಳೆಯರೊಂದಿಗೆ ಪಣ ತೊಟ್ಟು ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅಕಾಲಿಕ ನಿಧನದಿಂದ ಬಿಜೆಪಿ ಕೋಟೆಯ ಮೇಲೀಗ ಕಾಮೋಡವೇ ಕವಿದಂತಾಗಿದೆ. ಚಿತ್ತಾಪುರ ಕ್ಷೇತ್ರದ ಬಿಜೆಪಿಗೆ ಭದ್ರ ಬುನಾದಿಯಾಗಿದ್ದ ದಿ.ವಾಲ್ಮೀಕಿ ಅವರ ಸಾವು ಅವರ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ದೊಡ್ಡ ಆಘಾತ ನೀಡಿದ್ದು, ನಮ್ಮ ಮುಂದಿನ ನಾಯಕನಾರು ಎಂಬ ಅನಾಥ ಪ್ರಜ್ಞೆ ಕಾಡುತ್ತಿದೆ. ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದಲ್ಲಿ ಏಕೈಕ ಕಮಲ ನಾಯಕರಾಗಿ ಗುರುತಿಸಿಕೊಂಡಿದ್ದ ದಿ.ವಾಲ್ಮೀಕಿ ನಾಯಕ, ಕಾಂಗ್ರೆಸ್‌ನ ಹಿರಿಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಅವರ ಎದುರು ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದರಾದರೂ ರಾಜ್ಯದ ಗಮನ ಸೆಳೆದಿದ್ದರು.

Advertisement

ನಂತರ ರಾಜ್ಯದಲ್ಲಿ ಬೀಸಿದ ಯಡಿಯೂರಪ್ಪ ಗಾಳಿಯಲ್ಲಿ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸಿ ಉಪ ಚುನಾವಣೆ ಗೆದ್ದರು. ರಾಜಕೀಯ ಏಳುಬೀಳಿನ ಜತೆಗೆ ಪಕ್ಷವನ್ನು ಎತ್ತರಕ್ಕೆ ಬೆಳೆಸುವ ಮೂಲಕ ಹಳ್ಳಿ ಜನರ ಹೃದಯ ಗೆದ್ದು ಸಮರ್ಥ ನಾಯಕರಾಗಿ ವಾಲ್ಮೀಕಿ ಹೊರ ಹೊಮ್ಮಿದ್ದರು. ಮತ್ತೂಮ್ಮೆ ಶಾಸಕರಾಗುವ ಕನಸು ಹೊತ್ತಿದ್ದರು. ಎದೆಯಲ್ಲಿ ನಾಲ್ಕು ಸ್ಟಂಟ್‌ ಮತ್ತು ಎರಡೂ ಮೊಣಕಾಲು ಶಸ್ತ್ರ ಚಿಕಿತ್ಸೆಯ ನಂತರವೂ ಅದೇ ಹುಮ್ಮಸ್ಸಿನಿಂದ ಕ್ಷೇತ್ರದ ಸುತ್ತಾಟದಲ್ಲಿರುವಾಗಲೇ ವಿಧಿ ಯ ತೆಕ್ಕೆಗೆ ಜಾರಿದರು. ಮರಳಿ ಬಾರದ ಲೋಕಕ್ಕೆ ತೆರಳಿದ ನಾಯಕನನ್ನು ನೆನೆದು ಕ್ಷೇತ್ರದ ಕಾರ್ಯಕರ್ತರು ಕಣ್ಣೀರಾಗಿದ್ದಾರೆ.

ಬಿಜೆಪಿ ಎಂದರೆ ವಾಲ್ಮೀಕಿ ನಾಯಕ, ವಾಲ್ಮೀಕಿ ನಾಯಕ ಎಂದರೆ ಬಿಜೆಪಿ ಎನ್ನುವಷ್ಟರ ಮಟ್ಟಿಗೆ ಗುರುತಿಸಿಕೊಂಡಿದ್ದ ಅವರು ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳಲಾಗದೆ ಸಾಮಾನ್ಯ ಸದಸ್ಯರ ಮನಸ್ಸು ಅರಣ್ಯ ರೋದನವಾಗಿದೆ. ವಾಲ್ಮೀಕಿ ನಾಯಕ ಅವರು ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳನ್ನು ನಡು ಬೀದಿಯಲ್ಲಿ ಬಿಟ್ಟು ಹೋದಂತಾಗಿದೆ. ಚಿತ್ತಾಪುರ ಮೀಸಲು ಮತಕ್ಷೇತ್ರ ಒಡೆಯನಿಲ್ಲದ ಮನೆಯಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next