ವಾಡಿ: ಚಿತ್ತಾಪುರ ಮೀಸಲು ಮತ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಬಂಜಾರಾ ಸಮಾಜದ ಯುವ ನಾಯಕರು ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ ಅವರ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಇಂಗಳಗಿ ಮಂಡಲದ ಅಧ್ಯಕ್ಷ ಬಸವಂತರಾವ ಪಾಟೀಲ (ಗುಂಡುಗೌಡ), ಅಖಿಲ ಭಾರತ ಬಂಜಾರಾ ಸೇವಾ ಸಂಘದ ವಾಡಿ ವಲಯ ಅಧ್ಯಕ್ಷ ಶಂಕರ ಜಾಧವ, ಬಿಜೆಪಿ ಓಬಿಸಿ ಮೋರ್ಚಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ನಾಟೀಕಾರ ಇಂಗಳಗಿ, ಆರ್ಯ ಈಡಿಗ ಸಮಾಜದ ತಾಲೂಕು ಉಪಾಧ್ಯಕ್ಷ ಸಂಗಯ್ಯ ಗುತ್ತೇದಾರ, ಪುರಸಭೆ ಮಾಜಿ ಸದಸ್ಯ ವಿಜಯ್ ನಾಯಕ, ಬಂಜಾರಾ ಮುಖಂಡರಾದ ಹಣಮಂತ ಚವ್ಹಾಣ ಕಡಬೂರ, ರಾಜೇಂದ್ರ ಪವಾರ, ಬಾಬು ನಾಯಕ, ಕಿಶನ್ ನಾಯಕ, ಅಶೋಕ ಚವ್ಹಾಣ, ವೆಂಕಟೇಶ ಜಾಧವ, ಹೇಮಂತ ನಾಯಕ, ದಶರಥ ರಾಠೋಡ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು.
ಬಿಜೆಪಿ ತೊರೆದು ಬಂದ ಮುಖಂಡರೆಲ್ಲರನ್ನೂ ಕಾಂಗ್ರೆಸ್ ಪಕ್ಷದ ಶಾಲು ಹೊದಿಸುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಅವರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಪ್ರತಿಕ್ರೀಯಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಬಿಜೆಪಿ ತೊರೆದು ಬಂದ ಮುಖಂಡರನ್ನು ಪ್ರಿಯಾಂಕ್ ಖರ್ಗೆ ಅವರು ಸಾಂಕೇತಿಕವಾಗಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ವಾಡಿ ನಗರದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗುತ್ತಿದ್ದು, ಆ ವೇಳೆ ಅದ್ಧೂರಿಯಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಇವರೊಂದಿಗೆ ಇನ್ನೂ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಶಾಸಕ ಪ್ರಿಯಾಂಕ್ ಅವರ ಜಾತ್ಯಾತೀತ ನಿಲುವು ಮತ್ತು ಅಭಿವೃದ್ಧಿಯ ದೂರ ದೃಷ್ಠಿಯನ್ನು ಮನಗಂಡು ಪಕ್ಷಕ್ಕೆ ಆಕರ್ಷಿತರಾಗಿರುವುದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ ಎಂದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷ ಮನ್ಸೂರ್ ಖಾನ್ ಈ ಸಂದರ್ಭದಲ್ಲಿ ಹಾಜರಿದ್ದರು.