ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಜರಗುತ್ತಿರುವ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ-2018ರ ಸಮಾರೋಪ ಸಮಾರಂಭದಂದು ಯಕ್ಷಗಾನ ಹಿರಿಯ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆಯವರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಪ್ರಶಸ್ತಿಯನ್ನೂ, ಚಿಟ್ಟಾಣಿ ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ.ವಿ.ರಾವ್ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಹಿರಿಯ ಹವ್ಯಾಸಿ ಕಲಾವಿದ ಮಧುಕರ ಮಲ್ಯ ಅವರಿಗೆ ಪ್ರದಾನ ಮಾಡಲಾಗುವುದು.
ಮಾಧವ ಹೆಗಡೆ
1950ರಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳದ ಕಪ್ಪೆಕೆರೆಯಲ್ಲಿ ಜನಿಸಿದ ಹೆಗಡೆಯವರು ಓದಿದ್ದು ಹತ್ತನೇ ತರಗತಿಯವರೆಗೆ. ಇವರಿಗೆ ಯಕ್ಷಗಾನ ಅನುವಂಶೀಯವಾಗಿ ಬಂದ ಬಳುವಳಿ. ತಾಯಿಯ ತಂದೆ ಯಕ್ಷಗಾನ ಕಲಾವಿದರು. ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆ ಪ್ರಸಿದ್ಧ ಭಾಗವತರು. ಸುಬ್ರಾಯ ಹೆಗಡೆಯವರೇ ಇವರಿಗೆ ಯಕ್ಷಗಾನದ ಗುರು. ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿ ಗುಂಡುಬಾಳ, ಕಮಲಶಿಲೆ, ಅಮೃತೇಶ್ವರಿ, ಇಡಗುಂಜಿ, ಶಿರಸಿ, ಪಂಚಲಿಂಗ ಹಾಗೂ ಮಂದಾರ್ತಿ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆಗೈದಿರುತ್ತಾರೆ.
ನಾಯಕ-ಪ್ರತಿನಾಯಕ ಎರಡೂ ರೀತಿಯ ಪಾತ್ರಗಳಲ್ಲಿ ಕಲಾಪ್ರೌಢಿಮೆ ಮೆರೆದು ಕಲಾರಸಿಕರ ಮನಗೆದ್ದಿದ್ದಾರೆ. ಭೀಷ್ಮ, ವಲಲ, ಭೀಮ, ಸುಗ್ರೀವ, ವಾಲಿ, ಶ್ರೀರಾಮ, ಶತ್ರುಘ್ನ, ಮಹೋಗ್ರ, ಜಮದಗ್ನಿ, ರಾವಣ, ಮಾಗಧ, ಹರಿಶ್ಚಂದ್ರ, ವಿಶ್ವಾಮಿತ್ರ, ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿ ತಂದಿವೆ. ಮಧುಕರ ಮಲ್ಯ
ಮಧುಕರ ಮಲ್ಯರು ಶಿಕ್ಷಕರಾಗಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರು. ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನ ಹಾಗು ಇನ್ನಿತರ ಕಲಾಪ್ರಕಾರಗಳನ್ನು ಆಸಕ್ತರಾಗಿ ಅಭ್ಯಾಸ ನಡೆಸಿದರು. ಕಟಪಾಡಿಯಲ್ಲಿದ್ದ ಸಮಯದಲ್ಲಿ ಟಿ.ವಿ.ರಾವ್ ನೇತೃತ್ವದ ಮಂಜುಳಾ ಯಕ್ಷಗಾನ ಸಂಘದಲ್ಲಿ ಅತ್ಯುತ್ತಮ ಅರ್ಥಧಾರಿಯಾಗಿ ಹವ್ಯಾಸಿ ವೇಷಧಾರಿಯಾಗಿ ಮೂಡಿಬಂದರು. ಸ್ತ್ರೀಪಾತ್ರದ ಅರ್ಥಗಾರಿಕೆಯಲ್ಲಿ ಅಪೂರ್ವ ಸಿದ್ಧಿ ಪಡೆದ ಅವರು ಅನೇಕ ಪೌರಾಣಿಕ ಸ್ತ್ರೀಪಾತ್ರಗಳನ್ನು ವಾಗ್ವೆ„ಖರಿಯಿಂದ ಅನನ್ಯವಾಗಿ ಕಟ್ಟಿಕೊಟ್ಟಿದಾರೆ. ಹಿರಿಯರ ಕೂಟಗಳಲ್ಲಿ ಘಟಾನುಘಟಿಗಳೊಂದಿಗೆ ಸಮದಂಡಿಯಾಗಿ ಅರ್ಥಗಾರಿಕೆ ಮೆರೆದಿದ್ದಾರೆ. ಏಸುಕ್ರಿಸ್ತ ಮಹಾತ್ಮೆಯಲ್ಲಿ ಏಸು ಮತ್ತು ಅಂತೋನಿ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಾರಾಯಣ ಎಂ.ಹೆಗಡೆ