Advertisement

ಯಕ್ಷ ದಿಗ್ಗಜ ಚಿಟ್ಟಾಣಿಅವರಿಗೆ ಪುಣೆಯಲ್ಲಿ  ಶ್ರದ್ಧಾಂಜಲಿ ಸಭೆ

03:52 PM Oct 15, 2017 | |

ಪುಣೆ: ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಅ. 12ರಂದು ಪುಣೆ ಕನ್ನಡ ಸಂಘದ ಕನ್ನಡ ಮಾಧ್ಯಮ ಶಾಲೆಯ ತಳಮಹಡಿಯ ಹಾಲ್‌ನಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ  ಪುರಸ್ಕೃತ ಶ್ರೇಷ್ಠ  ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು.

Advertisement

ಮೊದಲಿಗೆ ಅಗಲಿದ ಕಲಾವಿದರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಅವರು ಮಾತನಾಡಿ, ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸಿದ ಮೇರು ಕಲಾವಿದನನ್ನು ನಾವು ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ. ಯಕ್ಷಗಾನ ರಂಗದಲ್ಲಿ ಬಲುದೊಡ್ಡ ಗೌರವ, ಪ್ರಶಸ್ತಿಗಳನ್ನು ಗಳಿಸಿದ ಕಲಾವಿದ ಇನ್ನೊಬ್ಬರಿಲ್ಲ. ಮುಂದೆಯೂ ದುರ್ಲಭ ಎನ್ನಬಹುದಾಗಿದೆ. ಎದುರು ವೇಷಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಅವರು ರಾಮಚಂದ್ರಾಪುರ ಮಠದಲ್ಲಿ ಗುರುಗಳ ಚಾತುರ್ಮಾಸ್ಯ ಸಂದರ್ಭ ನಿರಂತರವಾಗಿ ಯಕ್ಷಗಾನದಲ್ಲಿ ಭಾಗಿಯಾಗುತ್ತಿದ್ದರು. ಯಕ್ಷಗಾನ ಕಿರಿಯ ಕಲಾವಿದರುಗಳಿಗೆ ಅವರೊಬ್ಬ ಆದರ್ಶ ಕಲಾವಿದರಾಗಿದ್ದರು. ಮುಂದೆ ಅವರಂತಹ ಶ್ರೇಷ್ಠ ಕಲಾವಿದ ಮತ್ತೂಮ್ಮೆ  ಹುಟ್ಟಿಬರಲಿ. ಯಕ್ಷಗಾನ ಕಲೆಗೆ ನನ್ನ ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡು ಕಲೆಯನ್ನು ಉಳಿಸಿ ಬೆಳೆಸಿದ ದಾರ್ಶನಿಕ ವ್ಯಕ್ತಿತ್ವದ ಕಲಾವಿದ ಅವರಾಗಿದ್ದು, ಪುಣೆಯ ಯಕ್ಷ ಕಲಾಭಿಮಾನಿಗಳ ಪರವಾಗಿ ನಾವು ಈ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು  ಅರ್ಪಿಸೋಣ ಎಂದರು.

ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ಚಿಟ್ಟಾಣಿಯವರು ಮೂಲತಃ ಹೊನ್ನಾವರಾದವರಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಚಿಟ್ಟಾಣಿ ಶೈಲಿಯನ್ನು ಸೃಷ್ಟಿಸಿ ಮಾದರಿ ಕಲಾವಿದನಾಗಿ ಮೆರೆದವರಾಗಿದ್ದಾರೆ. ಯಕ್ಷಗಾನದಲ್ಲಿ ಸಾಧನೆಗೈದು ಪದ್ಮಶ್ರೀ ಪ್ರಶಸ್ತಿ ಗಳಿಸಿದ ಏಕೈಕ ಕಲಾವಿದ ಅವರಾಗಿದ್ದು, ಯಾವತ್ತೂ ತಾನೊಬ್ಬ ದೊಡ್ಡ ಕಲಾವಿದನೆನ್ನುವ ಅಹಂ ಭಾವ ಅವರಲ್ಲಿರಲಿಲ್ಲ. ತನ್ನೊಂದಿಗೆ ಪಾತ್ರ ಮಾಡುವ ಪ್ರತಿಯೊಬ್ಬ ಕಲಾವಿದನಲ್ಲಿಯೂ ಭೇದವಿರಿಸದೆ ಪ್ರದರ್ಶನದಲ್ಲಿ ಸುಧಾರಿಸಿಕೊಂಡು ಹೋಗುವ ಗುಣ ಹಾಗೂ ಕಿರಿಯ ಕಲಾವಿದರನ್ನು  ಬೆಳೆಸುವ ಅವರ ಗುಣ ವಿಶೇಷವಾಗಿತ್ತು. ಪುಣೆಯ ಕಲಾಭಿಮಾನಿಗಳ ಪರವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಈ ಕಾರ್ಯಕ್ರಮವನ್ನು  ಆಯೋಜಿಸಲಾಗಿದೆ.  ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದರು.

ಕನ್ನಡ ಮಾಧ್ಯಮ ಹೈಸ್ಕೂಲ್‌ ಪ್ರಾಂಶು ಪಾಲರಾದ ಚಂದ್ರಕಾಂತ ಹಾರಕೂಡೆ ಅವರು ಮಾತನಾಡಿ, ಯಕ್ಷಗಾನ ರಂಗದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಯಕ್ಷಗಾನವನ್ನು ಉಸಿರಾಗಿಸಿಕೊಂಡು ಕಲೆ ಯನ್ನು ಸಮೃದ್ಧಗೊಳಿಸಿದ ಶ್ರೇಷ್ಠ ವ್ಯಕ್ತಿತ್ವದ  ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಗಲಿಕೆ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟವೇ ಸರಿ. ಅವರನ್ನು ನಮ್ಮ ಸಂಘದ ಮೂಲಕ ಸ್ಮರಿಸುವುದು ಅರ್ಥಪೂರ್ಣವಾಗಿದೆ ಎಂದರು.

ಉಪಾಧ್ಯಕ್ಷ ಮಟ್ಟಾರ ಪ್ರಕಾಶ ಹೆಗ್ಡೆ ಮಾತನಾಡಿ, ನಾಡಿನ ಮಹಾನ ಕಲೆಯಾದ ಯಕ್ಷಗಾನವನ್ನು ಎತ್ತರದ ಸ್ಥಾನಕ್ಕೆ ಏರಿಸಿದ ಸಾಧಕ ಚಿಟ್ಟಾಣಿಯವರ ಅಗಲಿಕೆ ಕಲಾಭಿಮಾನಿಗಳೆಲ್ಲರಿಗೂ ದುಃಖವನ್ನು ತಂದಿದೆ. ಅವರ ಜೀವನ ಕಲಾವಿದರಿಗಳೆಲ್ಲರಿಗೂ ಆದರ್ಶವಾಗಿದ್ದು ಅವರ ಸೇವೆಗಳನ್ನು ಸ್ಮರಿಸುತ್ತ ಅವರ ಆತ್ಮಕ್ಕೆ ಶ್ರದ್ಧಾಂಜಲಿಯನ್ನು ಸಮರ್ಪಿಸೋಣ ಎಂದರು. ಸಂಘದ ಕೋಶಾಧಿ¬ಕಾರಿ ಹಿರಿಯ ಕಲಾವಿದ ವಾಸು ಕುಲಾಲ ವಿಟ್ಲ, ಕಲಾವಿದರಾದ ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ಸುಭಾಷ್‌ ರೈ ಕಾಟುಕುಕ್ಕೆ, ಯಾದವ ಬಂಗೇರ, ಸುದರ್ಶನ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

   ಚಿತ್ರ-ವರದಿ: ಕಿರಣ್‌ ಬಿ. ಕರ್ನೂರು ಪುಣೆ

Advertisement

Udayavani is now on Telegram. Click here to join our channel and stay updated with the latest news.

Next