ಸೋಮೇನಹಳ್ಳಿ: ಹೋಬಳಿಯಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ಗೊಟರುಗಳು ತುಂಬಿದ್ದು 8 ವರ್ಷಗಳ ಬಳಿಕ ಚಿತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ಮರಳಿಗಾಗಿ ತೆಗೆದಿದ್ದ ಎಲ್ಲಾ ಗುಂಡಿಗಳು ನೀರಿನಿಂದಾಗಿ ಮುಚ್ಚಿ ಹೋಗಿದ್ದು ತನ್ನ ಪಥದಲ್ಲಿಯೇ ಹರಿಯುತ್ತಿದೆ.
ಉರುಳಿ ಬಿದ್ದ ವಿದ್ಯುತ್ ಕಂಬ: ಕಮ್ಮಡಿಕೆ ಮತ್ತು ಮಿಟ್ಟೇಮರಿ ಗ್ರಾಮಗಳಿಗೆ ಹೋಗುವ ರಸ್ತೆಗೆ ಚಿತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ನೀರು ಹರಿದಿದೆ. ನದಿ ದಡದಲ್ಲಿದ್ದ ವಿದ್ಯುತ್ ಕಂಬಗಳು ನೀರಿನ ರಭಸಕ್ಕೆ ಉರುಳಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಸ್ಥರು ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ನಲ್ಲಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಭಾರೀ ಪ್ರಮಾಣದಲ್ಲಿ ತುಂಬಿ ಕೋಡಿ ಹೋಗುತ್ತಿದ್ದು ಡ್ಯಾಂನ್ನು ವೀಕ್ಷಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಚಿತ್ರಾವತಿ ನದಿಗೆ ದಯಾಲ ಮಡಗು ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಬರುತ್ತಿದೆ.
ಕಾಲುವೆಯಲ್ಲಿ ಗಿಡಗಂಟಿ: ನದಿ ನೀರು ಗಿಡಗಳ ಮೇಲೆ ಮರಗಳ ಮೇಲೆ ಹರಿಯುತ್ತಿರುವುದರಿಂದ ಮರಗಿಡಗಳು ನೆಲಕ್ಕೆ ಬಾಗಿವೆ. ದೇವಗಾನಹಳ್ಳಿ ಕ್ರಾಸ್‌ನಿಂದ ಸೋಮೇನಹಳ್ಳಿ ಕೆರೆಯವರೆಗೂ ನಿರ್ಮಿಸಿರುವ ಪೋಷಕ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ಅಲ್ಲದೇ, ಕಾಲುವೆಯಲ್ಲಿ ಹಳೆಯ ಬಟ್ಟೆ ಬರೆಗಳು, ಫ್ಲಾಸ್ಟಿಕ್ ಮುಂತಾದ ತ್ಯಾಜ್ಯ ತುಂಬಿಕೊಂಡಿದ್ದು ನೀರು ಕಾಲುವೆಯಲ್ಲಿ ಹರಿಯದೆ ಸೋಮೇನಹಳ್ಳಿ ಕೆರೆಗೆ ನೀರು ಬಾರದಂತಾಗಿದೆ.
ಕುಂಟೆ, ಬಾವಿಗಳಿಗೆ ನೀರು: ಮಳೆ ನೀರು ಸೋಮೇನಹಳ್ಳಿ ಸುತ್ತಮುತ್ತಲಿನ ಕೆರೆ, ಕುಂಟೆಗಳಲ್ಲಿ ತುಂಬಿದೆ. ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡ, ಸಣ್ಣಪುಟ್ಟ ಚೆಕ್ ಡ್ಯಾಂಗಳಲ್ಲಿ ನೀರು ನಿಂತಿದೆ.
ಚರಂಡಿ ನೀರು ರಸ್ತೆಗೆ: ಸೋಮೇನಹಳ್ಳಿ ಗ್ರಾಮದ ಕೆಲವು ಬೀದಿಗಳಲ್ಲಿ ಒಳ ಚರಂಡಿಗಳನ್ನು ಗ್ರಾಪಂ ಸ್ವಚ್ಛಗೊಳಿಸದ ಕಾರಣ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ತ್ಯಾಜ್ಯ ರಸ್ತೆ ಮೇಲೆಲ್ಲಾ ಹರಿದಿದೆ.
* ರಮೇಶ್