ಬೆಂಗಳೂರು: ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ “ಶ್ರೀ ರಾಘವೇಂದ್ರ ಚಿತ್ರವಾಣಿ’ ಸಂಸ್ಥೆಯ ವತಿಯಿಂದ ನೀಡಲಾಗುವ ” ‘ಯ 2021 ಮತ್ತು 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ.
2021ನೇ ಸಾಲಿನ “ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗೆ ಹಿರಿಯ ಚಲನಚಿತ್ರ ನಿರ್ಮಾಪಕ ಪಿ.ಧನರಾಜ್, ಹಿರಿಯ ಪತ್ರಕರ್ತ ಈಶ್ವರ ದೈತೋಟ ಆಯ್ಕೆಯಾಗಿದ್ದು, 2022ನೇ ಸಾಲಿನ ಪ್ರಶಸ್ತಿಗೆ ನಟ-ನಿರ್ಮಾಪಕ ಕುಮಾರ ಗೋವಿಂದ್, ಹಿರಿಯ ಪತ್ರಕರ್ತ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಆಯ್ಕೆಯಾಗಿದ್ದಾರೆ.
ಉಳಿದಂತೆ “ಡಾ|ರಾಜಕುಮಾರ್ ಪ್ರಶಸ್ತಿ’ಗೆ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್, “ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’ಗೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್, “ಡಾ|ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ’ಗೆ ಹಿರಿಯ ನಟಿ ಶ್ರೀಮತಿ ತುಳಸಿ ಅವರಿಗೆ ನೀಡಲಾಗುತ್ತಿದೆ.
“ಎಂ.ಎಸ್. ರಾಮಯ್ಯ ಮೀಡಿಯಾ ಆ್ಯಂಡ್ ಎಂಟರ್ ಟೈನ್ಮೆಂಟ್ (ಪ್ರೈ) ಲಿ ಪ್ರಶಸ್ತಿ’ಗೆ “777 ಚಾರ್ಲಿ’ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ನೋಬಿನ್ ಪಾಲ್, “ಕೆ.ವಿ.ಜಯರಾಂ ಪ್ರಶಸ್ತಿ’ಗೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ಕಥೆಗಾಗಿ ಮಧುಚಂದ್ರ, “ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ಗೆ “ಓಲ್ಡ್ ಮಾಂಕ್’ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಎಂ.ಜಿ.ಶ್ರೀನಿವಾಸ್ (ಶ್ರೀನಿ) ಆಯ್ಕೆಯಾಗಿದ್ದಾರೆ. “ಬಿ. ಸುರೇಶ ಪ್ರಶಸ್ತಿ’ಗೆ “777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್ ರಾಜ್, “ಶ್ರೀ ಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ಗೆ “ಕಾಂತಾರ’ ಚಿತ್ರದ “ಸಿಂಗಾರ ಸಿರಿಯೇ …’ ಗೀತ ರಚನೆಗಾಗಿ ಪ್ರಮೋದ್ ಮರವಂತೆ ಮತ್ತು “ಸಿ.ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ’ಗೆ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಕೋವಿಡ್‌ನಿಂದಾಗಿ ಕಳೆದ ವರ್ಷ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ಹಾಗಾಗಿ, ಕಳೆದ ವರ್ಷದ “ಶ್ರೀ ರಾಘವೇಂದ್ರ ಚಿತ್ತವಾಣಿ ಪ್ರಶಸ್ತಿ’ಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕರಾದ ಡಿ.ವಿ.ಸುಧೀಂದ್ರ ಅವರ ಜನ್ಮದಿನವಾದ ಜ.25ರಂದು ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು “ಶ್ರೀ ರಾಘವೇಂದ್ರ ಚಿತ್ರವಾಣಿ’ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್ ತಿಳಿಸಿದ್ದಾರೆ.