ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು 20ನೇ ಚಿತ್ರಸಂತೆಗೆ ಸಿದ್ಧವಾಗಿದೆ. ಈ ವರ್ಷ ಚಿತ್ರಸಂತೆ ಭೌತಿಕ ಹಾಗೂ ಆನ್‌ಲೈನ್ ರೂಪದಲ್ಲಿ ಆಯೋಜಿಸಲು ಚಿತ್ರಕಲಾ ಪರಿಷತ್ತು ಮುಂದಾಗಿದ್ದು, ಚಿತ್ರಸಂತೆಯಲ್ಲಿ ಭಾಗವಹಿಸಲು ಅಧಿಕ ಸಂಖ್ಯೆಯಲ್ಲಿ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ.
ಜ.7ರಂದು ಚಿತ್ರಸಂತೆ ನಡೆಯಲಿದ್ದು, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡ, ಸಿಕ್ಕಂ, ಪಂಜಾಬ್, ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಈ ಬಾರಿಯ ಚಿತ್ರಸಂತೆಯಲ್ಲಿ ಭಾಗವಹಿಸಲು ಹಿರಿಯ ಮತ್ತು ಕಿರಿಯ ಕಲಾವಿದರುಗಳು ಆಸಕ್ತಿ ತೋರಿಸಿದ್ದಾರೆ. ಈವರೆಗೂ ಸುಮಾರು 900 ಅರ್ಜಿಗಳು ಚಿತ್ರಕಲಾ ಪರಿಷತ್ತಿಗೆ ಸಲ್ಲಿಕೆ ಆಗಿದ್ದು, ಈ ಸಂಖ್ಯೆಯ ಮತ್ತಷ್ಟು ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಅರ್ಜಿ ಸಲ್ಲಿಸಿದ ಹೊರ ರಾಜ್ಯದ ಕಲಾವಿದರುಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಒಡಿಶಾ ಕಲಾವಿದರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರ ಭಾಗದದಿಂದ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಚಿತ್ರ ಸಂತೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದರು. ಆದರೆ, ಈ ಬಾರಿ ಈ ಹಿಂದಿನಷ್ಟು ಕಲಾವಿದರು ಚಿತ್ರ ಸಂತೆಗೆ ಭಾಗವಹಿಸಲು ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಕೆ ಇನ್ನೂ ಕೆಲವು ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಿಗೆ ಆಗುವ ವಿಶ್ವಾಸವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಈ ಬಾರಿಯ ಚಿತ್ರಸಂತೆಯಲ್ಲಿ ಭಾಗವಹಿಸಲು ಕಲಾವಿದರಿಗೆ ಡಿ.10 ಕೊನೆಯ ದಿನವಾಗಿತ್ತು. ಆದರೆ, ಕೆಲವು ತಾಂತ್ರಿಕ ದೋಷದಿಂದಾಗಿ ಪರಿಷತ್ತಿನ ಆಡಳಿತ ಮಂಡಳಿ ಕಲಾವಿದರ ಅರ್ಜಿ ಸಲ್ಲಿಸುವ ದಿನಾಂಕವನ್ನು ಡಿ.20ರ ವರೆಗೂ ವಿಸ್ತರಿಸಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹೇಳಿದ್ದಾರೆ.
ಚಿತ್ರಸಂತೆ ದೇಶ ಮಟ್ಟದಲ್ಲಿ ಹೆಸರುವಾಸಿ ಆಗಿದೆ. ದೇಶದ ನಾನಾ ಭಾಗಗಳಿಂದ ಹೆಸರಾಂತ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಡಿ.ಡಿ ತುಂಬುವುದು, ಕ್ಯೂಆರ್ ಕೋಡ್ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವಂತೆ ಕಲಾವಿದರು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಲಾಕೃತಿಗಳ ಮೆರವಣಿಗೆ: ಚಿತ್ರ ಸಂತೆಯಲ್ಲಿ ವಿವಿಧ ಶೈಲಿಯ ಕಲಾಕೃತಿಗಳ ಕಲಾಸಕ್ತರಿಗೆ ದೊರೆಯಲಿವೆ. ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೊ ಕಲೆ, ಗ್ರಾಫಿಕ್ ಕಲೆ, ಶಿಲ್ಪಕಲೆ, ಇನ್‌ಸ್ಟಲೇಶನ್ (ಪ್ರತಿಧಿಷ್ಠಾಧಿಪನಾ ಕಲೆ), ಪರ್ಫಾಮೆನ್ಸ್ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ ಸೇರಿದಂತೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳು ಒಂದೇ ಸೂರಿನಡಿ ನೋಡುಗರ ಗಮನ ಸೆಳೆಯಲಿವೆ.
ಚಿತ್ರಕಲಾ ಸಂತೆಗೆ ಚಿತ್ರಕಲಾ ಪರಿಷತ್ತು ಸಜ್ಜಾಗಿದೆ. 400ಕ್ಕೂ ಅಧಿಕ ಕಲಾವಿದರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಶೇ.50ಕ್ಕೂ ಅಧಿಕ ಕಲಾವಿದರು ಮೈಸೂರು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಭಾಗದವರು ಚಿತ್ರಸಂತೆಯಲ್ಲಿ ಭಾಗವಹಿಸುತ್ತಾರೆ. 19ನೇ ಚಿತ್ರಸಂತೆಯಲ್ಲಿ 3 ಕೋಟಿ ರೂ.ಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಈ ಬಾರಿ ಹೆಚ್ಚಿನ ವಹಿವಾಟು ನಿರೀಕ್ಷಿಸಲಾಗಿದೆ.
-ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ
-ದೇವೇಶ ಸೂರಗುಪ್ಪ