Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ತಾಪುರ ಲಾಸ್ಟ್‌

12:45 PM May 08, 2019 | Naveen |

ಚಿತ್ತಾಪುರ: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.47.69 ಫಲಿತಾಂಶ ಲಭಿಸಿದ್ದು, ಜಿಲ್ಲೆಯಲ್ಲಿಯಲ್ಲಿಯೇ ತಾಲೂಕು ಕೊನೆ ಸ್ಥಾನ ಪಡೆದಿದೆ. ಕಳೆದ ಬಾರಿ ಫಲಿತಾಂಶಕ್ಕೆ ಹೋಲಿಸಿದರೆ ಈ ಭಾರಿ ಕಳಪೆ ಸಾಧನೆ ಕಂಡು ಬಂದಿದೆ.

Advertisement

ಫಲಿತಾಂಶ ಸುಧಾರಣೆಗೆ ವಿಶ್ವಾಸ ಕಿರಣ, ತೀವ್ರ ನಿಗಾಕಲಿಕೆ, ವಿಶೇಷ ತರಗತಿ, ಪರಿಹಾರ ಬೋಧನೆಯಂತ ವಿಶೇಷ ಕಾರ್ಯಕ್ರಮ ಹಾಕಿಕೊಂಡರೂ ಫಲಿತಾಂಶದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಯೊಂದಿಗೆ ಸೇರಿಸಿ ಅಧ್ಯಯನ ಚಟುವಟಿಕೆ ನಡೆಸುವುದು. ಅದೇ ರೀತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರೇ ವಿಶೇಷ ಕಾಳಜಿ ವಹಿಸಿ ಅವರ ಮೇಲೆ ವಿಶೇಷ ನಿಗಾ ಇಡುವುದು. ಇವೆಲ್ಲ ಪ್ರಕ್ರಿಯೆಗಳನ್ನು ತರಗತಿ ಅವಧಿಯಲ್ಲಿಯೇ ನಡೆಸಲಾಗುತ್ತದೆ.

ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳ ಅಂಕ ಗಮನಿಸಿ, ಅದನ್ನು ಆಧಾರವಾಗಿಟ್ಟುಕೊಂಡು ಆಯಾ ಶಾಲೆಗಳಲ್ಲಿ ಪರಿಹಾರ ಬೋಧನಾ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಶಿಕ್ಷಕರನ್ನು ಪುನಶ್ಚೇತನಗೊಳಿಸಲು ವಿಷಯವಾರು ವೇದಿಕೆಯ ಅನುಭವ ಹಂಚಿಕೆ ಕಾರ್ಯಾಗಾರ, ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಾಗಾರ, ಶಿಕ್ಷಣಾಧಿಕಾರಿಗಳು ಮಕ್ಕಳ ಮನೆಗೆ ದೂರವಾಣಿ ಕರೆ ಮಾಡಿ ಕಲಿಕಾ ಖಾತ್ರಿ ಪಡಿಸಿಕೊಂಡಿರುವುದು, ನೇರ ಫೋನ್‌ ಇನ್‌ ಕಾರ್ಯಕ್ರಮ, ಶಿಕ್ಷಕರಿಗಾಗಿ ಪ್ರೇರಣಾ ಕಾರ್ಯಕ್ರಮ, ಹತ್ತರ ಭಯ ಹತ್ತಿರ ಬೇಡ, ತಾಲೂಕು ಮಟ್ಟದ ವಿಜ್ಞಾನ ಚಿತ್ರ ಬಿಡಿಸುವ ಸ್ಪರ್ಧೆ, ಎಸ್ಸೆಸ್ಸೆಲ್ಸಿ ಕಲಿಕಾ ಮತ್ತು ಚಟುವಟಿಕೆಗಳ ತಪಾಸಣೆ ಸೇರಿದಂತೆ ಇತ್ಯಾದಿ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಸಹ ಫಲಿತಾಂಶ ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಗೆ ಕೊನೆ ಸ್ಥಾನ ಸಿಗುವಂತಾಗಿದೆ. ಇದು ಶಿಕ್ಷಣ ಇಲಾಖೆ ಮತ್ತು ಪಾಲಕರನ್ನು ಚಿಂತೆಗೀಡು ಮಾಡಿದೆ.

ಕಳೆದ ಹತ್ತು ವರ್ಷಗಳ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಗಮನಿಸಿದರೆ ಏರಿಳಿತ ಕಂಡು ಬಂದಿದೆ. 2009-10ರಲ್ಲಿ ಶೇ. 52.12, 2010-11ರಲ್ಲಿ ಶೇ. 69.96, 2011-12ರಲ್ಲಿ ಶೇ. 66.20, 2012-13ರಲ್ಲಿ ಶೇ. 57.28, 2013-14ರಲ್ಲಿ ಶೇ. 75.33, 2014-15ರಲ್ಲಿ ಶೇ. 71.03, 2015-16ರಲ್ಲಿ ಶೇ. 74.66, 2016-17ರಲ್ಲಿ ಶೇ. 74.61, 2017-18ರಲ್ಲಿ ಶೇ. 66.30, 2018-19ರಲ್ಲಿ ಶೇ. 47.69 ರಷ್ಟು ಲಭಿಸಿದೆ. ಹೀಗಾಗಿ ಕಳೆದ ಹತ್ತು ವರ್ಷಗಳಲ್ಲಿ ಈ ವರ್ಷವೇ ಜಿಲ್ಲೆಯಲ್ಲಿಯೇ ಚಿತ್ತಾಪುರ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಅತ್ಯಂತ ಕಳಪೆ ಮತ್ತು ಕೊನೆ ಸ್ಥಾನ ಪಡೆದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.

Advertisement

ಫಲಿತಾಂಶ ಕುಸಿತವಾಗಲು ಕಾರಣವೇನು ಎನ್ನುವುದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಬಹುತೇಕ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಇಂಗ್ಲಿಷ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿ ಕಲಿಕಾ ಗುಣಮಟ್ಟ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ ಎನ್ನುವುದು ಶಿಕ್ಷಕರ ಅಭಿಪ್ರಾಯ.

ಪ್ರೌಢಶಾಲೆ ಹಂತಕ್ಕೆ ಬಂದ ವಿದ್ಯಾರ್ಥಿಗಳಿಗೆ ಎಬಿಸಿಡಿ, ಮಗ್ಗಿ ಕಲಿಸಬೇಕಾದ ಪರಿಸ್ಥಿತಿ ಇದೆ. ಇಂತಹ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಫಲಿತಾಂಶದಲ್ಲಿ ಸುಧಾರಣೆ ತರುವುದು ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಪ್ರತಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿ ಎಸ್ಸೆಸ್ಸೆಲ್ಸಿಯಲ್ಲಿ ಸುಧಾರಣೆ ತರಬಹುದು ಎನ್ನಲಾಗುತ್ತಿದೆ.

ತಾಲೂಕಿನಲ್ಲಿ ಬಹುತೇಕ ಪ್ರೌಢಶಾಲೆಗಳಲ್ಲಿ ಅನೇಕ ವರ್ಷಗಳಿಂದ ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯ ಶಿಕ್ಷಕರ ಕೊರತೆಯಿದೆ. ಕೆಲವೆಡೆ ಅತಿಥಿ ಶಿಕ್ಷಕರು ಬೋಧನೆ ಮಾಡಿದ್ದಾರೆ. ಉಳಿದ ಶಾಲೆಗಳಲ್ಲಿ ಇದುವರೆಗೊ ಇಂಗ್ಲಿಷ್‌, ವಿಜ್ಞಾನ, ಗಣಿತ ವಿಷಯದ ಬೋಧಕರೇ ಇಲ್ಲ. ಇದರಿಂದ ಫಲಿತಾಂಶಕ್ಕೆ ಹಿನ್ನಡೆಯಾಗಿದೆ. ಶೀಘ್ರವೇ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡರೆ ಫಲಿತಾಂಶ ಸುಧಾರಣೆಗೆ ಒಂದು ಹೆಜ್ಜೆ ಮುಂದಿಡಬಹುದು ಎನ್ನಲಾಗುತ್ತಿದೆ.

ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕುರಿತು ಕಾಳಜಿ ಇಲ್ಲ. ಹೀಗಾಗಿ ಶಿಕ್ಷಕರಿಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷ‚ಣ ನೀಡಬೇಕು ಎನ್ನುವುದಿಲ್ಲ. ಈ ಭಾಗದ ಕೆಲವು ಶಿಕ್ಷಕರಿಗೆ ಶಿಕ್ಷಣದಲ್ಲಿನ ಆಸಕ್ತಿಗಿಂತ ರಾಜಕೀಯ ಮಾಡಬೇಕು ಎನ್ನುವುದೇ ದೊಡ್ಡ ಆಸೆ ಆಗಿದೆ. ಶಾಲೆಗೆ ಚಕ್ಕರ್‌ ಹಾಕಿ ಬರೀ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ಬಳಿಯೇ ಸುತ್ತುತ್ತಿರುತ್ತಾರೆ.
•ಲಕ್ಷ್ಮೀಕಾಂತ ಕುಲಕರ್ಣಿ,
ಸ್ಥಳೀಯ ನಿವಾಸಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಹತ್ತು ವರ್ಷದಲ್ಲಿ ಅನೇಕ ಶೈಕ್ಷಣಿಕ ಕಾರ್ಯಕ್ರಮ ಮಾಡಿದ್ದೇವೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಮಕ್ಕಳ ನಕಲಿಗೂ ಅವಕಾಶ ಮಾಡಿಕೊಟ್ಟಿಲ್ಲ. ಕಳೆದ ಬಾರಿ ಒಂದೂ ಶಾಲೆಗೆ ಶೇ. 100 ಫಲಿತಾಂಶ ಬಂದಿದ್ದಿಲ್ಲ. ಈ ಬಾರಿ ತಾಲೂಕಿನಲ್ಲಿ ಎರಡು ಶಾಲೆಗಳಿಗೆ ಶೇ. 100ಫಲಿತಾಂಶ ಲಭಿಸಿದೆ. ಬಹುತೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಉಳಿದ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆಯಿಂದ ಫಲಿತಾಂಶ ಅತ್ಯಂತ ಕಡಿಮೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಹೆಚ್ಚಳ ಮಾಡುವುದಕ್ಕೆ ಮುಖ್ಯಶಿಕ್ಷಕರ ಸಭೆ ನಡೆಸಿ ಸೂಕ್ತ ತಯಾರಿ ನಡೆಸಲು ಸೂಚಿಸಲಾಗಿದೆ.
•ಶಂಕ್ರಮ್ಮ ಡವಳಗಿ,
ಕ್ಷೇತ್ರ ಶಿಕ್ಷಣಾಧಿಕಾರಿ

ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next