Advertisement

ನಾಲ್ಕು ವರ್ಷವಾದ್ರೂ ರಚನೆಯಾಗಿಲ್ಲ ಸ್ಥಾಯಿ ಸಮಿತಿ

03:52 PM Jan 10, 2020 | Naveen |

ಚಿತ್ತಾಪುರ: ತಾ.ಪಂ ಸದಸ್ಯರಾಗಿ ನಾಲ್ಕು ವರ್ಷಗತಿಸುತ್ತಿದ್ದರೂ ಇಲ್ಲಿಯ ವರೆಗೂ ಸ್ಥಾಯಿ ಸಮಿತಿ ರಚಿಸಿಲ್ಲ, ಇವುಗಳು ರಚನೆಯಾಗುವ ವರೆಗೆ ಸಾಮಾನ್ಯ ಸಭೆ ಮಾಡಬೇಡಿ ಎಂದು ತಾ.ಪಂ ಸದಸ್ಯೆ ಕಲಾವತಿ ಸಂಗನ್‌ ತಾ.ಪಂ ಇಒ ಮತ್ತು ಅಧ್ಯಕ್ಷರನ್ನು ತರಾಟೆ ತೆಗೆದುಕೊಂಡರು.

Advertisement

ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹಕ್ಕು ನಮಗೆ ಕೊಡಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಾ.ಪಂ ಇಒ ಅನೀತಾ ಪೂಜಾರಿ, ದಿನಾಂಕವೊಂದನ್ನು ನಿಗ ಪಡಿಸಿ ಸಮಿತಿ ರಚನೆ ಮಾಡೋಣ ಎಂದು ಹೇಳಿದರು.

ಬೀದರ ಸಂಸದರಿಗ್ಯಾಕೆ ಮಾಹಿತಿ ನೀಡಿಲ್ಲ?: ಚಿತ್ತಾಪುರ ತಾಲೂಕು ಪಂಚಾಯತಿ ಕಲಬುರಗಿ ಮತ್ತು ಬೀದರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಆದರೆ ಕೇವಲ ಕಲಬುರಗಿ ಲೋಕಸಭೆ ಸದಸ್ಯರಿಗೆ ಮಾತ್ರ ಸಭೆ ನಡೆಯುವ ಮಾಹಿತಿ ನೀಡಿದ್ದೀರಿ. ಬೀದರ ಲೋಕಸಭೆ ಸದಸ್ಯರಿಗೆ ಯಾಕೆ ನೀಡಿಲ್ಲ ಎಂದು ತಾಪಂ ಸದಸ್ಯ ರಾಮು ಅರಣಕಲ್‌ ತಾ.ಪಂ ಇಒ ವಿರುದ್ಧ ಹರಿಹಾಯ್ದರು.

ಚಿತ್ತಾಪುರ ತಾ.ಪಂ ಕಲಬುರಗಿ ಜಿಲ್ಲೆಗೆ ಮಾತ್ರ ಒಳಪಡುತ್ತದೆ ಎನ್ನುವ ತಪ್ಪು ತಿಳಿವಳಿಕೆಯಿಂದ ಹೀಗಾಗಿದೆ. ಇನ್ಮುಂದೆ ಬೀದರ ಲೋಕಸಭೆ ಸದಸ್ಯರಿಗೂ ಸಭೆಯ ನೋಟಿಸ್‌ ಕಳುಹಿಸಿ, ದೂರವಾಣಿ ಮುಖಾಂತರ ತಿಳಿಸುತ್ತೇನೆ ಎಂದರು.

ಸ್ವತ್ಛತೆಗೆ ಆದ್ಯತೆ ನೀಡಿ: ಪ್ರತಿ ವರ್ಷ ಸ್ವಚ್ಛತೆ ಮತ್ತು ಇತರೆ ಕೆಲಸ ಕಾರ್ಯಗಳಿಗಾಗಿ ತಾ.ಪಂಗೆ ಅನುದಾನವೆನೋ ಬರುತ್ತದೆ. ಆದರೆ ಸ್ವತಃ ತಾ.ಪಂ ಕಚೇರಿ ಆವರಣದಲ್ಲಿಯೇ ಸ್ವಚ್ಛತೆ ಇಲ್ಲ. ಅದರಲ್ಲೂ ಶೌಚಾಲಯವಂತೂ ದುರ್ವಾಸನೆ ಬೀರುತ್ತಿದೆ. ಇಷ್ಟಾದರೂ ಅಧಿಕಾರಿಗಳು ಏಕೆ ಗಮನ ಹರಿಸಿಲ್ಲ ಎಂದು ತಾ.ಪಂ ಸದಸ್ಯ ಸುಧಿಧೀರ ಅಲ್ಲೂರ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾ.ಪಂ ಇಒ ಕಚೇರಿಯಲ್ಲಿ ಡಿ. ಗ್ರೂಪ್‌ ನೌಕರರ ಕೊರತೆಯಿದೆ ಎಂದು ತಿಳಿಸಿದರು.

Advertisement

ಅನಧಿಕೃತ ತೂಕದ ಯಂತ್ರ: ತಾಲೂಕಿನ ಹಲವು ಗ್ರಾಮಗಳಲ್ಲಿ ಅನಧಿಕೃತ ಕಾಟಾಗಳು ಇವೆ. ಹೀಗಾಗಿ ರೈತರಿಗೆ ಲಾಭ ದೊರಕುತ್ತಿಲ್ಲ. ಕ್ರಮ ಕೈಗೊಳ್ಳಿ ಎಂದು ತಾ.ಪಂ ಅಧ್ಯಕ್ಷ ಜಗದೇವರೆಡ್ಡಿ ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.

ನೈಜ ಫಲಾನುಭವಿಗಳಿಗೆ ಆದ್ಯತೆ ನೀಡಿ: ಅಂಗವಿಕಲರಿಗೆ ಶೇ.5ರ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಣೆಗೆ ಯಾರನ್ನು ಕೇಳಿ ಫಲಾನುಭವಿಗಳ ಆಯ್ಕೆ ಮಾಡಿದ್ದೀರಿ ಎಂದು ತಾ.ಪಂ ಸದಸ್ಯ ಭಾಗಪ್ಪ ಯಾದಗಿರ ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ತಾ.ಪಂ ಸದಸ್ಯ ಮುನಿಯಪ್ಪ ಕೊಳ್ಳಿ, ಆಗಿನ ಇಒ ಪಶು ಅಧಿಕಾರಿ ಡಾ| ಬಸಲಿಂಗಪ್ಪ ಡಿಗ್ಗಿ ಶಾಸಕರ ಶಿಫಾರಸಿನ ಮೇರೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಏಳು ಫಲಾನುಭವಿಗಳಲ್ಲಿ ತಾ.ಪಂ ಅಧ್ಯಕ್ಷರ ಮಗಳ ಹೆಸರಿದೆ. ಆದ್ದರಿಂದ ನೈಜ ಫಲಾನುಭವಿಗಳ ಆಯ್ಕೆಗೆ ಆದ್ಯತೆ ನೀಡಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಜಿ.ಪಂ, ಅರಣ್ಯ, ತೋಟಗಾರಿಕೆ, ನೀರಾವರಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ, ಆಹಾರ, ಪಶು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಸಿಡಿಪಿಒ, ಕೃಷಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು.

ತಾ.ಪಂ ಸದಸ್ಯರಾದ ಬಸವರಾಜ ಹೊಸ್ಸಳ್ಳಿ, ಮಲ್ಲಣ್ಣ ಸಣಮೋ, ರವಿ ಪಡ್ಲಾ, ಸುಧಿಧೀರ ಅಲ್ಲೂರ, ರೇವಣಸಿದ್ದಪ್ಪ ಮಡಕಿ, ಕಲಾವತಿ ಸಂಗನ್‌, ವಿಜಯಲಕ್ಷ್ಮೀ ಚವ್ಹಾಣ, ಮಹಾದೇವಿ ಮಲ್ಲಿನಾಥ, ರತ್ನಮ್ಮ ಗುತ್ತೇದಾರ, ನೀಲಾಬಾಯಿ ರಾಠೊಡ, ಶಶಿಕಲಾ ರಾಠೊಡ, ವಂದನಾ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next