Advertisement

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

09:18 PM Oct 19, 2021 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಹಾಗೂ ಮಾರಿಗುಡಿ ವಾರ್ಡ್‌ನ ನಿವಾಸಿಗಳಿಗಾಗಿ ಕೋಟ ಹೈಸ್ಕೂಲ್‌ ಬಳಿ ಇರುವ ಸಿ.ಎ. ಬ್ಯಾಂಕ್‌ ಶಾಖೆಯಲ್ಲಿ ನೂತನ ಪಡಿತರ ಕೇಂದ್ರ ಆರಂಭವಾಗುತ್ತಿದ್ದು ಇಲ್ಲಿನ ಜನರ ಹಲವು ದಶಕಗಳ ಪಡಿತರ ಪರಿಪಾಟಲು ಅಂತ್ಯಗೊಳ್ಳುತ್ತಿದೆ.

Advertisement

ಈ ಎರಡು ವಾರ್ಡ್‌ನ ಗ್ರಾಮಸ್ಥರು ಪಡಿತರ ಸಾಮಗ್ರಿಗಳನ್ನು ತರಲು ಇದುವರೆಗೆ ಸಾಲಿಗ್ರಾಮದ ಪಡಿತರ ಕೇಂದ್ರವನ್ನು ಅವಲಂಬಿಸಿದ್ದರು. ಸಾಲಿಗ್ರಾಮ ಪಡಿತರ ಕೇಂದ್ರದಲ್ಲಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಗ್ರಾಹಕರಿದ್ದು, ಈ ಎರಡು ವಾರ್ಡ್‌ಗಳಿಂದ 357 ಬಿ.ಪಿ.ಎಲ್‌., 47 ಅಂತ್ಯೋದಯ, 100ಕ್ಕೂ ಹೆಚ್ಚು ಎ.ಪಿ.ಎಲ್‌. ಸೇರಿದಂತೆ ಒಟ್ಟು 504ಕ್ಕೂ ಹೆಚ್ಚು ಕಾರ್ಡ್‌ ಗಳಿತ್ತು. ಹೀಗಾಗಿ ಪ್ರತೀ ತಿಂಗಳು ಜನದಟ್ಟಣೆಯಿಂದ ಪಡಿತರ ಪಡೆಯಲು ಗಂಟೆಗಟ್ಟಲೆ ಕಾಯಬೇಕಿತ್ತು ಹಾಗೂ ವಾರ್ಡ್‌ನ ತುತ್ತತುಡಿಯಲ್ಲಿರುವವರಿಗೆ ಪಡಿತರ ಕೇಂದ್ರ ನಾಲ್ಕೈದು ಕಿ.ಮೀ. ದೂರವಾಗುತಿತ್ತು. ಹೀಗಾಗಿ ಎರಡು ವಾರ್ಡ್‌ಗೆ ಒಟ್ಟಾಗಿ ಪ್ರತ್ಯೇಕ ಪಡಿತರ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂದು ಹಲವು ದಶಕಗಳಿಂದ ಬೇಡಿಕೆ ಇತ್ತು.

ಆಸರೆ ಯುವಕ ಮಂಡಲ ಹೋರಾಟ
ಚಿತ್ರಪಾಡಿ ಗ್ರಾಮದ ಮಾರಿಗುಡಿ ಮತ್ತು ಕಾರ್ತಟ್ಟು ವಾರ್ಡ್‌ಗೆ ಪ್ರತ್ಯೇಕ ಪಡಿತರ ಕೇಂದ್ರ ಸ್ಥಾಪಿಸಬೇಕು ಎಂದು ಸ್ಥಳೀಯ ಆಸರೆ ಯುವಕ ಮಂಡಲದ ವತಿಯಿಂದ ಬೇಡಿಕೆ ಸಲ್ಲಿಸಲಾಗಿತ್ತು ಹಾಗೂ ಸಂಘದ ಸದಸ್ಯರು ಇಲಾಖೆಗೆ ಮನವಿ ಸಲ್ಲಿಸಿ ಕಡತ ವಿಲೇವಾರಿಗೆ ಹೋರಾಟ ನಡೆಸಿದ್ದರು. ಕೋಟ ಸಿ.ಎ. ಬ್ಯಾಂಕ್‌ ಕೂಡ ಮುತುವರ್ಜಿ ವಹಿಸಿ ಸಹಕಾರ ನೀಡಿತ್ತು. ಸ್ಥಳೀಯ ಜನಪ್ರತಿನಿಧಿಗಳು, ಸಿ.ಎ. ಬ್ಯಾಂಕ್‌ ನಿರ್ದೇಶಕರು, ಶಾಖಾ ಸಭಾಪತಿ ರಾಜೇಶ್‌ ಉಪಾಧ್ಯ ಸಹಕಾರ ನೀಡಿದ್ದರು.

ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ಗ್ರಾಮಸ್ಥರಿಗೆ ಅನುಕೂಲ
ಮಾರಿಗುಡಿ ಮತ್ತು ಕಾರ್ತಟ್ಟು ವಾರ್ಡ್‌ನ ಸುಮಾರು 500ಕ್ಕೂ ಹೆಚ್ಚು ಗ್ರಾಹಕರಿಗೆ ಪಡಿತರ ಕೇಂದ್ರ ದೂರವಿರುವ ಕಾರಣ ಸಮಸ್ಯೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿತ್ತು. ಇಲಾಖೆ ಅನುಮತಿ ನೀಡಿದರೆ ಗ್ರಾಮಸ್ಥರ ಅನುಕೂಲಕ್ಕಾಗಿ ನಷ್ಟವಾದರೂ ಪಡಿತರ ಕೇಂದ್ರ ಸ್ಥಾಪಿಸುವುದಾಗಿ ಈ ಹಿಂದೆ ಭರವಸೆ ನೀಡಿದ್ದೆವು. ಸ್ಥಳೀಯ ಆಸರೆ ಯುವಕ ಮಂಡಲ ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಗೆ ಮನವಿ ಮಾಡಿ ಕಡತ ವಿಲೇವಾರಿಗೆ ಸಹಕರಿಸಿದ್ದು, ಬ್ಯಾಂಕ್‌ ವತಿಯಿಂದ ಕೂಡ ಅಗತ್ಯ ಸಹಕಾರ ನೀಡಿದ್ದೆವು. ಇದೆಲ್ಲದರ ಫಲವಾಗಿ ಪಡಿತರ ಕೇಂದ್ರ ಉದ್ಘಾಟನೆಯಾಗುತ್ತಿರುವುದು ಖುಷಿಯ ವಿಚಾರವಾಗಿದೆ.
-ತಿಮ್ಮ ಪೂಜಾರಿ, ಅಧ್ಯಕ್ಷರು
ಕೋಟ ಸಿ.ಎ.ಬ್ಯಾಂಕ್‌

Advertisement

ಸುದಿನ ವರದಿ
ಈ ಬಗ್ಗೆ ಉದಯವಾಣಿ ಸುದಿನ 2020 ಡಿ.15ರ ಸಂಚಿಕೆಯಲ್ಲಿ “ಪಡಿತರ ಪರಿಪಾಟಲು; ಚಿತ್ರಪಾಡಿ ಗ್ರಾಮಸ್ಥರಿಗೆ ಬೇಕಿದೆ ಪ್ರತ್ಯೇಕ ಪಡಿತರ ಕೇಂದ್ರ’ ಎನ್ನುವ ಜನಪರ ಕಾಳಜಿಯ ವರದಿ ಪ್ರಕಟಿಸಿ ಗಮನಸೆಳೆದಿತ್ತು ಹಾಗೂ ಅನಂತರ ಈ ಬಗ್ಗೆ ಹೋರಾಟ ಚುರುಕು ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next