ಚಿತ್ರದುರ್ಗ: ಚಿತ್ರದುರ್ಗ ಇತಿಹಾಸದಿಂದ ಕರ್ನಾಟಕ ರಾಜ್ಯದ ಶಾಸನ ಇತಿಹಾಸ ಆರಂಭವಾಯಿತು ಎಂದು ಶಾಸನ ಸಂಶೋಧಕಿ ಹುಬ್ಬಳ್ಳಿಯ ಡಾ| ಹನುಮಾಕ್ಷಿ ಗೋಗಿ ಹೇಳಿದರು.
ಇಲ್ಲಿನ ಐಎಂಎ ಹಾಲ್‌ನಲ್ಲಿ ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಇತಿಹಾಸಕ್ಕೆ ಅಣ್ಣಿಗೇರಿ ಶಾಸನಗಳ ಕೊಡುಗೆ’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಜಿಲ್ಲೆಯಲ್ಲಿ ದೊರೆತ ಬ್ರಹ್ಮಗಿರಿ, ಸಿದ್ದಾಪುರ, ಜಟಂಗಿ ರಾಮೇಶ್ವರ ಶಾಸನಗಳ ಮೂಲಕ ಅಶೋಕನ ಶಾಸನದ ಲಿಖೀತ ಇತಿಹಾಸ ಆರಂಭಗೊಂಡಿತು. ಕ್ರಿಪೂ 3 ರಿಂದ ಹಿಡಿದು 20ನೇ ಶತಮಾನದವರೆಗೆ ಬೆಳೆದು ಬಂದಿರುವ ಇತಿಹಾಸದಿಂದ ಅಶೋಕ ಶಾಸನಗಳಿಗೆ ಮಹತ್ವ ಪ್ರಾಪ್ತಿಯಾಯಿತು. ಬಿ.ಎಲ್. ರೈಸ್ ಮುಂತಾದವರು ಇತಿಹಾಸ ಅಧ್ಯಯನ, ಶಾಸನ ಅಧ್ಯಯನಗಳಿಗೆ ಕೈಹಾಕಿದರು. ದೇಶಿ-ವಿದೇಶಿ ವಿದ್ವಾಂಸರ ಕಾರಣದಿಂದ ಕರ್ನಾಟಕದಾದ್ಯಂತ ಶಾಸನಗಳು ಪ್ರಕಟಗೊಂಡವು ಎಂದರು.
ಆದಿಕವಿ ಪಂಪ 1965-66 ರ ಸುಮಾರಿಗೆ ಪರಬ್ರಹ್ಮ ಶಾಸ್ತ್ರಗಳ ಕುರ್ಕಿಯಾಳ ಶಾಸನವನ್ನು ಪ್ರಕಟಿಸಿದ್ದಾರೆ. ಪಂಪ ಹುಟ್ಟಿದ ಊರು ಅಣ್ಣಿಗೇರಿ ಎಂಬ ತೀರ್ಮಾನಕ್ಕೆ ಜನ ಬಂದರೂ ಅಣ್ಣಿಗೇರಿಯಲ್ಲಿರುವ ಶಾಸನಗಳು ಪಂಪನ ಕುರಿತಾಗಿ ಏನು ದಾಖಲಿಸುತ್ತವೆ ಎನ್ನುವುದನ್ನು ನೋಡಿದರೆ ಪಂಪ ಅಣ್ಣಿಗೇರಿಯಲ್ಲಿ ಹುಟ್ಟಿಲ್ಲವೆನ್ನುವುದು ಗೊತ್ತಾಗುತ್ತದೆ. ರಾಷ್ಟ್ರಕೂಟರಿಗೆ ಸಂಬಂಧಿಸಿದ ವೀರಗಲ್ಲುಗಳು ಅಣ್ಣಿಗೇರಿಯಲ್ಲಿದೆ. ಕಲ್ಯಾಣ ಚಾಲುಕ್ಯರ ಶಾಸನಗಳು ಅಣ್ಣಿಗೇರಿಯಲ್ಲಿ ಹೆಚ್ಚು ಸಿಕ್ಕಿದೆ. ಹನ್ನೊಂದು ಶಾಸನಗಳು ಅಣ್ಣಿಗೇರಿಯಲ್ಲಿ ಸಿಗುತ್ತದೆ. ಅಚ್ಯುತದೇವರಾಯನಿಗೆ ಸಂಬಂಧಿಸಿದ ಒಂದು ಶಾಸನವೂ ಅಣ್ಣಿಗೇರಿಯಲ್ಲಿದೆ. ಗಂಗ ಪೆರುಮಾಳ್ ಬಸದಿ ಅಣ್ಣಿಗೇರಿಯಲ್ಲಿ ಉಳಿದಿರುವ ಏಕೈಕ ಬಸದಿ ಎಂದರು.
ಭಾರತದಲ್ಲಿ ಎಲ್ಲಾ ಧರ್ಮ ಪಂಥಗಳು ಇದೆ. ನಾಡನ್ನಾಳಿದ ಎಲ್ಲಾ ಧರ್ಮಗಳು ಅಣ್ಣಿಗೇರಿಯಲ್ಲಿ ಬರುತ್ತವೆ. ಜೈನರಿಗೆ ಸಂಬಂಧಿಸಿದ ಗುರು ಪರಂಪರೆ ಅಣ್ಣಿಗೇರಿಯಲ್ಲಿ ಸಿಗುತ್ತದೆ. ಚಂಡಿಕಾದೇವಿಯ ಆವಾಸ ಸ್ಥಾನವೂ ಇಲ್ಲಿತ್ತು. ಜೈನರು, ಶೈವರು, ಕಾಳಾಮುಖೀಗಳು ಇಲ್ಲಿದ್ದರು ಎನ್ನುವುದನ್ನು ಶಾಸನಗಳು ಹೇಳುತ್ತವೆ. ಶಿಕ್ಷಣ ಕೇಂದ್ರಗಳೂ ಇದ್ದವು ಎಂದು ತಿಳಿಸಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ| ಎನ್.ಎಸ್. ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತಿಹಾಸ ಕೂಟದ ನಿರ್ದೇಶಕ ಪ್ರೊ| ಲಕ್ಷ್ಮಣ ತೆಲಗಾವಿ, ರೇಣುಕಾ ಶಿವಣ್ಣ, ಸಾಹಿತಿ ಡಾ| ಬಿ.ಎಲ್. ವೇಣು, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ, ನ್ಯಾಯವಾದಿ ಅಹೋಬಲ ನಾಯಕ, ರಾಜಾ ಮದಕರಿ ನಾಯಕ, ಕೆ. ನಾಗರಾಜ್, ಎಸ್.ಆರ್. ಗುರುನಾಥ್, ಮೃತ್ಯುಂಜಯ ಭಾಗವಹಿಸಿದ್ದರು. ಟಿ. ಶ್ರೀಕಾಂತಬಾಬು ನಿರೂಪಿಸಿದರು.
ತಮಿಳುನಾಡಿನಲ್ಲಿ ಅತಿ ಹೆಚ್ಚು ಶಾಸನ ಪತ್ತೆ
ಭಾರತದಲ್ಲಿ ತಮಿಳುನಾಡು ರಾಜ್ಯದಲ್ಲಿ ಅತಿ ಹೆಚ್ಚು 35 ರಿಂದ 40 ಸಾವಿರ ಶಾಸನಗಳು ಪತ್ತೆಯಾಗಿದೆ. ಎರಡನೇ ಸ್ಥಾನ ಕರ್ನಾಟಕಕ್ಕಿದ್ದು 25 ಸಾವಿರ ಶಾಸನಗಳು ಪತ್ತೆಯಾಗಿದೆ. ಆದರೂ ಶಾಸನಗಳ ಓದುವಿಕೆ ಆಗುತ್ತಿಲ್ಲ. ತುಂಗಭದ್ರೆಯ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಶೋಧನೆಗಳನ್ನು ನಡೆಸಿರುವ ಬಿ.ಎಲ್. ರೈಸ್ ಎಂಟು ಸಾವಿರ ಶಾಸನಗಳನ್ನು ಪತ್ತೆ ಹಚ್ಚಿ ತೆಗೆದು ಓದಿದ್ದಾರೆ. ತುಂಗಭದ್ರೆಯ ಉತ್ತರ ಜಿಲ್ಲೆಗಳಲ್ಲಿ ವ್ಯವಸ್ಥಿತ ಕ್ಷೇತ್ರ ಕಾರ್ಯ ನಡೆಯಲಿಲ್ಲ. ಉತ್ತರ ಕರ್ನಾಟಕದ ಕ್ಷೇತ್ರ ಕಾರ್ಯ ನಡೆಯದ ಕಾರಣ ಹಲವಾರು ಶಾಸನಗಳಿಗೆ ಇನ್ನೂ ಮುಕ್ತಿ ದೊರಕಿಲ್ಲ ಎಂದು ಗೋಗಿ ಬೇಸರ ವ್ಯಕ್ತಪಡಿಸಿದರು.