Advertisement

ವಲ್ಲಭಬಾಯ್‌ ಪಟೇಲರ ಕೊಡುಗೆ ಸ್ಮರಣೀಯ

12:43 PM Nov 01, 2019 | Naveen |

ಚಿತ್ರದುರ್ಗ: ಸರ್ದಾರ್‌ ವಲ್ಲಭಬಾಯ್‌ ಪಟೇಲರು ಈ ದೇಶದ ಪ್ರಧಾನಿಯಾಗಿದ್ದರೆ ದೇಶದ ಚಿತ್ರಣವೇ ಬದಲಾಗಿರುತ್ತಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಅಭಿಪ್ರಾಯಪಟ್ಟರು.

Advertisement

ಭಾರತದ ಪ್ರಪ್ರಥಮ ಉಪಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಜನ್ಮದಿನದ ಅಂಗವಾಗಿ ಗುರುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಏಕತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸರ್ದಾರ್‌ ವಲ್ಲಭಭಾಯ್‌ ಪಟೇಲರು ಪ್ರಧಾನಿ ಹುದ್ದೆಯನ್ನು ಅಲಂಕರಿಸಬೇಕಿತ್ತು. ಹಾಗಾಗಿದ್ದರೆ ದೇಶದ ಭವಿಷ್ಯವೇ ಬದಲಾಗುತ್ತಿತ್ತು. ಭಾರತ ಉಜ್ವಲವಾಗುತ್ತಿತ್ತು ಎಂದು ಕೆಲವು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದು ಅವರ ಅಚಲವಾದ ನಂಬಿಕೆಯಾಗಿತ್ತು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುವ ಕುರಿತು ಸರ್ದಾರ್‌ ವಲ್ಲಬ್‌ಭಾಯ್‌ ಪಟೇಲ್‌ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಅಂದೇ ಇದನ್ನು ವಿರೋಧಿ ಸಿದ್ದರು ಎಂದರು.

ಭಾರತದ ಏಕತೆ ಹಾಗೂ ಸಾರ್ವಭೌಮತೆಗೆ ತಮ್ಮ ಬದುಕನ್ನು ಮೀಸಲಿಟ್ಟಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಭಾರತ ಒಕ್ಕೂಟ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಜನ್ಮದಿನವಾದ ಇಂದು ಏಕತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅದರಂತೆ ಏಕತಾ ಓಟ ನಡೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ನಿರ್ವಹಿಸಿದ ಕಾರ್ಯವನ್ನು ಯಾರೂ ಮರೆಯುವಂತಿಲ್ಲ. ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್‌ ಅನ್ನು ಭಾರತದ ಒಕ್ಕೂಟಕ್ಕೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಇದರಿಂದ ಹೈದರಾಬಾದ್‌ನಲ್ಲಿ ನಿಜಾಮರ ಆಡಳಿತ ಕೊನೆಯಾಯಿತು. ಭಾರತದ ಅಖಂಡತೆ, ಸಾರ್ವಭೌಮತೆಯನ್ನು ಸಾರುವಲ್ಲಿ ಸರ್ದಾರ್‌ ಪಟೇಲರು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡರು ಎಂದು ಸ್ಮರಿಸಿದರು.

ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ. ಸಿದ್ದೇಶ್‌, ಮುಖಂಡರಾದ ಸಿದ್ದೇಶ್‌ ಯಾದವ್‌, ಮಲ್ಲಿಕಾರ್ಜುನ್‌, ಮುರುಳಿ, ರತ್ನಮ್ಮ, ಜಿತೇಂದ್ರ ಎನ್‌. ಹುಲಿಕುಂಟೆ, ರೇಖಾ, ಶಂಭು, ಚಂದ್ರಿಕಾ ಲೋಕನಾಥ್‌, ಶಾಂತಮ್ಮ, ದಗ್ಗೆ ಶಿವಪ್ರಕಾಶ್‌, ನಾಗರಾಜ್‌ ಬೇದ್ರೆ, ನಗರಸಭೆ ಸದಸ್ಯ ಸುರೇಶ್‌, ಸತ್ಯನಾರಾಯಣ, ವೆಂಕಟೇಶ್‌ ಯಾದವ್‌, ಕಲ್ಲೇಶಯ್ಯ, ತಿಪ್ಪೇಸ್ವಾಮಿ, ಎಬಿವಿಪಿ ಚಂದ್ರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next