Advertisement

ಮೂಲ ಸೌಲಭ್ಯಕ್ಕೆ ಜನಸಂಖ್ಯಾ ಹೆಚ್ಚಳ ಅಡ್ಡಿ

12:17 PM Jul 12, 2019 | Team Udayavani |

ಚಿತ್ರದುರ್ಗ: ದೇಶದಲ್ಲಿನ ಬಡತನ ನಿರ್ಮೂಲನೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ದೇಶದ ಸಮಸ್ಯೆಗಳ ಪರಿಹಾರಕ್ಕೆ ಜನಸಂಖ್ಯಾ ನಿಯಂತ್ರಣ ಅನಿವಾರ್ಯ ಎಂದು ಜಿಲ್ಲಾ ಪಂಚಾಯತ್‌ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತ್‌ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಕುಟುಂಬ ಕಲ್ಯಾಣ ವಿಧಾನಗಳ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ ಇದ್ದಿದ್ದು, ಪ್ರಸ್ತುತ 136 ಕೋಟಿಗೆ ಏರಿದೆ. ಭೂಮಿ ಮಾತ್ರ ಎಷ್ಟಿತ್ತೂ ಅಷ್ಟೇ ಇದೆ. ಪ್ರತಿ ಸೆಕೆಂಡ್‌ಗೆ 4 ರಿಂದ 5 ಮಗು ಹುಟ್ಟಿದರೆ ಮರಣ ಪ್ರಮಾಣ ಶೇ. 1 ರಿಂದ 2 ರಷ್ಟಾಗಿದೆ. ಇದರಿಂದ ಪ್ರತಿ ಸೆಕೆಂಡ್‌ಗೆ 2 ರಿಂದ 3 ಮಕ್ಕಳು ಇರುವ ಜನಸಂಖ್ಯೆಗೆ ಸೇರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ಸೌಲಭ್ಯಗಳ ಕೊರತೆಯುಂಟಾಗಿ ಇದರಿಂದ ಬಡತನ, ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೆ ಮೂಲ ಸೌಲಭ್ಯಗಳ ಕೊರತೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ರಂಗನಾಥ್‌ ಮಾತನಾಡಿ, ಗ್ರಾಮ ಹಾಗೂ ನಗರಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಸಾರ್ವಜನಿಕರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಜನರ ಆರೋಗ್ಯ ಸುಧಾರಣೆ ಜೊತೆಗೆ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಡಾ| ರವೀಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ತ್ರೀ ಸಂತಾನಹರಣ ಶಸ್ತ್ರಚಿಕಿತ್ಸೆಗಿಂತ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಅತಿ ಸಣ್ಣ ಮತ್ತು ಸರಳವಾಗಿದೆ. ಆದ್ದರಿಂದ ಪುರುಷರು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದೆ ಬರಬೇಕು. ಪುರುಷರಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಬಗ್ಗೆ ತಪ್ಪು ಕಲ್ಪನೆ ಇದೆ. ಇದನ್ನು ಹೋಗಲಾಡಿಸಿ ಅರಿವು ಮೂಡಿಸಬೇಕೆಂದರು.

Advertisement

ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಯಮ್ಮ ಮಾತನಾಡಿ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದ ಬಹುತೇಕ ಸಮಸ್ಯೆಗಳಿಗೆ ಏರುತ್ತಿರುವ ಜನಸಂಖ್ಯೆಯೇ ಕಾರಣ. ಇದರ ನಿಯಂತ್ರಣಕ್ಕೆ ಎಲ್ಲರ ಸಹಭಾಗಿತ್ವ ಅವಶ್ಯಕ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ವಿಧಾನಗಳ, ಜನಸಂಖ್ಯಾ ನಿಯಂತ್ರಣಕ್ಕೆ ಶ್ರಮಿಸಿದ ವೈದ್ಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 39 ಜನರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಒ. ಸುಧಾ, ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ಎ. ಗಿರೀಶ್‌ ಮತ್ತಿತರರರು ಇದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಪಾಲಾಕ್ಷ ಸ್ವಾಗತಿಸಿದರು. ಮೂಗಪ್ಪ ನಿರೂಪಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next