Advertisement

ಪೌರಕಾರ್ಮಿಕರ ಕಾರ್ಯ ಸ್ತುತ್ಯರ್ಹ: ಡಿಸಿ

11:12 AM Aug 08, 2019 | Naveen |

ಚಿತ್ರದುರ್ಗ: ಪೌರಕಾರ್ಮಿಕರು ಸಾರ್ವಜನಿಕ ಸ್ಥಳಗಳನ್ನು ಮಾತ್ರ ಸ್ವಚ್ಛಗೊಳಿಸಬೇಕು. ಮನೆ ಮನೆಯ ಕಸವನ್ನು ವಿಭಜಿಸಿ ಕಸದ ಗಾಡಿಗೆ ಹಾಕುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ಪ್ರಿಯಾ ಹೇಳಿದರು.

Advertisement

ಸಮಾಜಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಬುಧವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಸಿ ಮತ್ತು ಒಣಗಿದ ಕಸವನ್ನಾಗಿ ವಿಭಜಿಸಿ ಕಸದ ಗಾಡಿಗೆ ಹಾಕುವ ಜವಾಬ್ದಾರಿ ಕಸ ಉತ್ಪಾದನೆ ಮಾಡುವ ಮನೆ ಮಾಲೀಕರದ್ದು. ಈ ಕಸವನ್ನು ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಕೈಯಿಂದ ಮುಟ್ಟಬಾರದು ಎಂದರು.

ಸಾರ್ವಜನಿಕ ಸ್ಥಳ, ರಸ್ತೆ ಸೇರಿದಂತೆ ಸಾಮಾನ್ಯ ಸ್ವಚ್ಛತಾ ಕೆಲಸಗಳನ್ನಷ್ಟೇ ಪೌರಕಾರ್ಮಿಕರು ಮಾಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಹಂತ ಹಂತವಾಗಿ ಎಲ್ಲವೂ ಕಡಿಮೆಯಾಗಬೇಕು. ಜಿಲ್ಲೆಯನ್ನು ಸ್ವಚ್ಛವಾಗಿಡುವಲ್ಲಿ ಎಲ್ಲ ಪೌರಕಾರ್ಮಿಕರ ಪರಿಶ್ರಮವಿದೆ. ಈ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೌರ ಕಾರ್ಮಿಕರು ಹಾಗೂ ಅವರ ಮಕ್ಕಳು ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಇದು ನಿಮ್ಮ ಹಕ್ಕು ಎಂದು ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್‌. ರಾಜಶೇಖರ್‌ ಮಾತನಾಡಿ, ಪೌರಕಾರ್ಮಿಕರು ದೇವರ ಮಕ್ಕಳು. ಅವರು ಮಾಡುವ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಇದು ಅತ್ಯಂತ ಪ್ರಾಮಾಣಿಕವಾದ ಕರ್ತವ್ಯ ಎಂದು ಶ್ಲಾಘಿಸಿದರು.

ಜನರ ಮನಸ್ಥಿತಿ ಬದಲಾಗಬೇಕಿದೆ. ಎಲ್ಲವನ್ನೂ ಪೌರಕಾರ್ಮಿಕರೇ ಬಂದು ಮಾಡಿಕೊಡಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ನಿಮ್ಮ ಮನೆಯ ಕಸವವನ್ನು ನೀವೇ ಹಸಿ ಮತ್ತು ಒಣಗಿದ ಕಸ ಎಂದು ವಿಭಾಗ ಮಾಡಿ ತಂದು ವಾಹನಕ್ಕೆ ಸುರಿಯಬೇಕು ಎಂದು ಮನವಿ ಮಾಡಿದರು.

Advertisement

ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ನಡೆದಿದೆ. ಚಿತ್ರದುರ್ಗದಲ್ಲಿ ಇನ್ನೂ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದವರ ವಿವರಗಳನ್ನು ಗಮನಿಸಿದಾಗ ಅಚ್ಚರಿಯಾಗಿದೆ. ಎಸ್ಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪಡೆದವರು ಕೂಡಾ ಅರ್ಜಿ ಹಾಕಿದ್ದಾರೆ. ಇದಕ್ಕೆ ನಿರುದ್ಯೋಗ ಸಮಸ್ಯೆ ಕಾರಣವಿರಬಹುದು. ಆದರೆ ಪೌರಕಾರ್ಮಿಕರ ಮಕ್ಕಳು ಮತ್ತೆ ಇದೇ ಕೆಲಸಕ್ಕೆ ಬರಬೇಕು ಎನ್ನುವ ಯೋಚನೆ ಬಿಟ್ಟು ಚೆನ್ನಾಗಿ ಓದಿ ಉನ್ನತ ಸ್ಥಾನಮಾನ ಗಳಿಸುವ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.

ಪೌರಕಾರ್ಮಿಕರ ಸ್ವಸಹಾಯ ಸಂಘ ರಚನೆ: ಕಸವನ್ನು 27 ಮಾದರಿಗಳಲ್ಲಿ ಸಂಗ್ರಹಿಸಬಹುದು. ಹಸಿ ಕಸವನ್ನು ಆಯಾ ಮನೆಗಳಲ್ಲೇ ಕಾಂಪೋಸ್ಟ್‌ ಮಾಡಬಹುದು. ಇನ್ನೂ ಒಣ ಕಸದಲ್ಲಿ ಮರುಬಳಕೆ ಮಾಡುವ ಕುರಿತು ಯೋಚನೆ ನಡೆಯುತ್ತಿದೆ. ಬಿಸಾಡಿದ ವಸ್ತುಗಳಿಂದ ಮರು ಬಳಕೆ ಮಾಡುವ ವಸ್ತುಗಳನ್ನು ತಯಾರಿಸುವ ಬಗ್ಗೆ ಪೌರ ಕಾರ್ಮಿಕರ ಕುಟುಂಬಗಳಿಗೆ ತರಬೇತಿ ನೀಡಿ ಅದರಿಂದ ಲಾಭ ಬರುವಂತೆ ಮಾಡುವ ಚಿಂತನೆ ನಡೆಯುತ್ತಿದೆ. ಇದಕ್ಕಾಗಿ ಪೌರ ಕಾರ್ಮಿಕರ ಮೂರ್‍ನಾಲ್ಕು ಸ್ವಸಹಾಯ ಸಂಘಗಳನ್ನು ರಚಿಸಲಾಗುವುದು ಎಂದು ರಾಜಶೇಖರ್‌ ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾಯ್ದೆ ಹಾಗೂ ಪುನರ್ವಸತಿ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಪೌರಾಯುಕ್ತರಾದ ಚಂದ್ರಪ್ಪ, ಮಹಾಂತೇಶ್‌, ಹನುಮಂತರಾಜು, ಜಿಲ್ಲಾ ಶಸ್ತ್ರಚಿಕಿತ್ಸಕ ಆನಂದ ಪ್ರಕಾಶ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಎಸ್‌ಇಪಿ ಹಾಗೂ ಟಿಎಸ್‌ಪಿ ಅನುದಾನಗಳಲ್ಲಿ ಪೌರಕಾರ್ಮಿಕರು, ವಾಹನ ಚಾಲಕರು, ಸಹಾಯಕರು ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರಿಗೆ ಶೇ. 20 ರಷ್ಟು ಅನುದಾನ ಮೀಸಲಿಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಹಣದಲ್ಲಿ ಪೌರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿ ವೇತನ, ಕಾರ್ಮಿಕರಿಗೆ ಮನೆ, ಆರೋಗ್ಯಕ್ಕೆ ಖರ್ಚು ಮಾಡಲು ಈ ವರ್ಷದಿಂದ ಯೋಜನೆ ಸಿದ್ಧಗೊಳ್ಳಲಿದೆ.
ಎಸ್‌. ರಾಜಶೇಖರ್‌,
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next