Advertisement

ಪ್ರಕೃತಿಗಿದೆ ದುರಹಂಕಾರ ಅಡಗಿಸುವ ಶಕ್ತಿ

01:27 PM Mar 12, 2020 | Naveen |

ಚಿತ್ರದುರ್ಗ: ವೈಭವೋಪೇತ, ಅದ್ಧೂರಿ ಬದುಕು ನಡೆಸುವವರ ಭ್ರಮೆಯನ್ನು ನಿಸರ್ಗ ಮುರಿದು ಹಾಕುತ್ತದೆ. ಎಲ್ಲರ ದುರಂಹಂಕಾರ ಅಡಗಿಸುವ ಶಕ್ತಿ ಪ್ರಕೃತಿಗಿದೆ ಎಂದು ಡಾ|ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಮುರುಘಾ ಮಠ, ಎಸ್‌ಜೆಎಂ ವಿದ್ಯಾಪೀಠ ಹಾಗೂ ಎಸ್‌ಜೆಎಂ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೂ ಶಾಶ್ವತವಲ್ಲ. ಹಾಗೆಯೇ ಎಲ್ಲದೂ ನಮ್ಮದಲ್ಲ. ಯಕಃಶ್ಚಿತ್‌ ಒಂದು ವೈರಸ್‌ ಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದೆ. ಜೀವನವೇ ಒಂದು ಸವಾಲು. ಅದನ್ನು ಸ್ವೀಕರಿಸಬೇಕು ಎಂದರು.

ಮನೆಯೊಳಗೆ ಸ್ತ್ರೀ ಸುರಕ್ಷಿತವಾಗಿದ್ದಾಳೆಯೇ, ಕೈ ಹಿಡಿದವರು ಅನುಕಂಪದಿಂದ ನೋಡಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತದೆ. ಮಾನಸಿಕ ಕಿರುಕುಳ, ಹಿಂಸೆ ಅನುಭವಿಸುತ್ತಿದ್ದಾಳೆ. ಒಬ್ಬ ಮಹಿಳೆ ನೂರು ಶಿಕ್ಷಕರಿಗೆ ಸಮಾನಳು. ಮಹಿಳೆಯರಿಗೆ ಶೇ. 33 ಮೀಸಲಾತಿ ಇನ್ನೂ ಸರಿಯಾದ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಶ್ರೀಮಠ ಶೇ. 45 ರಷ್ಟು ಹೆಣ್ಣುಮಕ್ಕಳಿಗೆ ಉದ್ಯೋಗದಲ್ಲಿ ಅವಕಾಶ ಮಾಡಿಕೊಟ್ಟಿದೆ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಯಥಾವತ್ತಾಗಿ ಪಾಲಿಸುತ್ತಿದ್ದೇವೆ. ಶರಣ ತತ್ವದ ಪ್ರಕಾರ ಸ್ತ್ರೀ ಪುರುಷರಲ್ಲಿ ವ್ಯತ್ಯಾಸ ಕಾಣಬಾರದು. ಪುರುಷರು ಹೊಂದಿರುವಷ್ಟೇ ಸ್ಥಾನಮಾನವನ್ನು ಮಹಿಳೆಯರೂ ಹೊಂದಿದ್ದಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕಷ್ಟಪಟ್ಟು ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾತನಾಡಿ, ನಮಗೆ ಶಿಕ್ಷಣ ಬಹಳ ಮುಖ್ಯ. ಜ್ಞಾನ ನಮ್ಮಲ್ಲಿದ್ದರೆ ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡುತ್ತೇನೆಂಬ ಗುರಿ ಇರಬೇಕು. ಆ ಗುರಿಯನ್ನು ಹೇಗೆ ತಲುಪುವುದು ಎಂಬುದು ಮುಖ್ಯ. ನಾನು ನನ್ನೊಳಗೆ ಅಭಿವೃದ್ಧಿ ಹೊಂದುತ್ತಿದ್ದೇನೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿರಬೇಕು. ನಿಮ್ಮ ಶಿಕ್ಷಣ ನಿಮ್ಮ ಬೆಳವಣಿಗೆಗೆ ಪೂರಕವಾದ ವಾತಾವರಣ ಉಂಟಾಗಬೇಕು. ಯಾವುದೇ ಕೆಲಸ ಮಾಡುವಾಗ ಯೋಚಿಸಿ ಮಾಡಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಮಾತನಾಡಿ, ಹಿಂದಿನ ಮಹಿಳೆಯರು ಸಮಾನತೆಗಾಗಿ ಹೋರಾಡುತ್ತಿದ್ದರು. ಇದರ ಪರಿಣಾಮ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಂತು. 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಮಾನತೆಗಾಗಿ ಬುನಾದಿ ಹಾಕಿದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಅಮುಗೆ ರಾಯಮ್ಮ ಮೊದಲಾದವರು ಸಮಾನತೆಗಾಗಿ ದುಡಿದರು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತಾಯಿಯಾಗಿ, ಹೆಂಡತಿಯಾಗಿ ಸಮರ್ಥವಾಗಿ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವುದರಲ್ಲಿ ಮಹಿಳೆ ಸಮರ್ಥಳು ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಶೈಕ್ಷಣಿಕವಾಗಿ ಮುಂದುವರಿ ಮಹಿಳೆ ಆರ್ಥಿಕವಾಗಿ ಮುಂದೆ ಬಂದು ಸ್ತ್ರೀ ಸಬಲೀಕರಣ ಆಗಬೇಕು. ಎಲ್ಲರಿಗೂ ಆದರ್ಶಪ್ರಾಯರಾಗಬೇಕು ಎಂದು ಹೇಳಿದರು.

Advertisement

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧಾ ಮಾತನಾಡಿ, ಮಹಿಳೆಯರನ್ನು ಕ್ಷಮಯಾಧರಿತ್ರಿ ಎನ್ನುತ್ತಾರೆ. ತಾಯಿ ಎನ್ನುವ ಪದವೇ ದೊಡ್ಡದು. ಎಲ್ಲ ತಪ್ಪುಗಳನ್ನು ಕ್ಷಮಿಸುವ ಶಕ್ತಿ ಹೆಣ್ಣಿಗಿದೆ. ನಾವು ದೀನರಾಗಿ ಪುರುಷರಿಗೆ ಕೈಚಾಚಬೇಕಿದೆ. ಗಂಡಸರು ಒಳ್ಳೆಯವರಿದ್ದಾರೆ. ಆದರೆ ಕೆಲವು ಮನೆಗಳಲ್ಲಿ ಹೆಂಗಸರಿಗೆ ರಕ್ಷಣೆ ಇಲ್ಲವಾಗಿದೆ. ಎಲ್ಲ ಮನೆಯಲ್ಲೂ ಹೆಣ್ಣನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಈಗಲೂ ಇದೆ. ಮನೆಯೊಳಗೆ ನಮಗಿರುವ ರಕ್ಷಣೆ ಹೊರಬಂದಾಗ ಇರುವುದಿಲ್ಲ. ಹಿರಿಯರ ಸಂಪ್ರದಾಯಗಳನ್ನು ಹೊರೆ ಅಂದುಕೊಳ್ಳಬಾರದು. ಹಿರಿಯರ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಬೆಂಗಳೂರಿನ ಜಗದಾಂಬ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ನಿರ್ದೇಶಕಿ ರುದ್ರಾಣಿ ಗಂಗಾಧರ ಇದ್ದರು. ಇದೇ ವೇಳೆ ಎಸ್‌ ಜೆಎಂ ಸಮೂಹ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಹಿರೇಮಠ ಸ್ವಾಗತಿಸಿದರು. ಜಿ.ಎನ್‌.ರೂಪ ನಿರೂಪಿಸಿದರು. ವನಿತಾ ಶಂಕರಮೂರ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next