Advertisement

ಶೇ. 100 ಮತದಾನ ಸಂವಿಧಾನದ ಆಶಯ

02:51 PM Jan 26, 2020 | Naveen |

ಚಿತ್ರದುರ್ಗ: ಚುನಾವಣೆಗಳಲ್ಲಿ ಜಾತಿ, ಧರ್ಮ, ಸಿರಿವಂತಿಕೆಯನ್ನು ಪರಿಗಣಿಸದೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಎಸ್‌.ವೈ. ವಟವಟಿ ಕರೆ ನೀಡಿದರು.

Advertisement

ಜಿಲ್ಲಾಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಅನೇಕ ಜಾತಿ, ಧರ್ಮ, ಸಮುದಾಯಗಳನ್ನು ಒಳಗೊಂಡ ಸರ್ವ ಸಮಾನತೆಯ ಗಣರಾಜ್ಯವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಮಾನತೆಯನ್ನು ಕಾಪಾಡಲಾಗುತ್ತಿದೆ. ಹಿಂದೆ ಶೇ. 50 ರಿಂದ 60 ರಷ್ಟು ಮಾತ್ರ ಮತದಾನ ದಾಖಲಾಗುತ್ತಿತ್ತು. ಅಲ್ಪ ಪ್ರಮಾಣದ ಮತದಾನ ನಡೆದ ಸಂದರ್ಭದಲ್ಲಿ ಶೇ. 15 ರಿಂದ 20 ರಷ್ಟು ಮತ ಪಡೆದವರು ಚುನಾಯಿತರಾಗುತ್ತಿದ್ದರು. ಇಷ್ಟು ಕಡಿಮೆ ಪ್ರಮಾಣದ ಮತ ಪಡೆದವರು ಹೇಗೆ ಜನಪ್ರತಿನಿಧಿ ಅನ್ನಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

ಚುನಾವಣೆ, ಮತದಾನ, ಜನಪ್ರತಿನಿ ಧಿಗಳ ಆಯ್ಕೆ ಸರಿಯಾಗಿ ನಡೆಯದಿದ್ದರೆ ಸಂವಿಧಾನದ ಆಶಯ ಈಡೇರಲು ಹಾಗೂ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ಹೇಗೆ ಸಾಧ್ಯ ಎಂದರು. ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡ ಬಳಿಕ ಮತದಾನ ಪ್ರಮಾಣ ಶೇ. 70ರ ಗಡಿ ದಾಟಿದೆ. ಶೇ. 100 ರಷ್ಟು ಮತದಾನ ಆಗಬೇಕು ಎನ್ನುವುದು ಸಂವಿಧಾನದ ಆಶಯ. ಬಡವರು, ಅಶಿಕ್ಷಿತರು ಮತ ಚಲಾಯಿಸುತ್ತಾರೆ. ಆದರೆ
ಸುಶಿಕ್ಷಿತರು, ಶ್ರೀಮಂತರು ಮತ ಹಾಕಲು ಬರುತ್ತಿಲ್ಲ. ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿಯನ್ನು ಕೇವಲ ರೈಲ್ವೆ ಟಿಕೆಟ್‌ ಖರೀದಿಗೆ ಅಥವಾ ಇತರೆ ಗುರುತು ತೋರಿಸಲು ಮಾತ್ರ ಬಳಸದೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಳಸಬೇಕು ಎಂದು ಹೇಳಿದರು.

ಚುನಾವಣೆಯಲ್ಲಿ ದುಡ್ಡು ಕೊಟ್ಟು ಆರಿಸಿ ಬಂದವರಿಂದ ಮತದಾರರು ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಈಗಾಗಲೇ ಭಾರತೀಯರು ಗುಲಾಮಗಿರಿ ಅನುಭವಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಮತದಾರರು ಯಾರ ಗುಲಾಮರಾಗುವುದು ಬೇಡ. ಚುನಾವಣೆಯಲ್ಲಿ ಯಾವುದೇ ಪ್ರಭಾವಗಳಿಗೆ ಒಳಗಾಗದೆ ನೈತಿಕವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ಚುನಾವಣೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಯುವ ಮತದಾರರು ಕಾರಣ. ಯುವಜನರು ಮತದಾರರ ಪಟ್ಟಿಯಲ್ಲಿ ಎಲ್ಲ ಅರ್ಹರು ನೊಂದಣಿ ಮಾಡಿಸಲು ಪ್ರೋತ್ಸಾಹ ನೀಡಬೇಕು ಎಂದರು.

ನಮ್ಮ ದೇಶ ವಿಶ್ವದಲ್ಲಿಯೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಇಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿದ್ದು, ಇತರೆ ದೇಶಗಳು ನಮ್ಮ ಚುನಾವಣಾ ಮಾದರಿಯನ್ನು ಅನುಸರಿಸುತ್ತಿವೆ. ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಸಮಂಜಸವಲ್ಲ. ಚುನಾವಣೆಯಲ್ಲಿ ತಮ್ಮ ಮತದಾನ ಹಕ್ಕು ಚಲಾಯಿಸುವ ಮೂಲಕ ತಮ್ಮ ಅಭಿಪ್ರಾಯ ನೀಡಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಸಿ. ಸತ್ಯಭಾಮಾ ಮಾತನಾಡಿ, ಚುನಾವಣೆಯಲ್ಲಿ ಪ್ರತಿ ಮತಕ್ಕೂ ಮಹತ್ವವಿದೆ. ಕೇವಲ ಒಂದು ಮತದಿಂದ ಸೋತಿರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಆದ್ದರಿಂದ ಮತದಾನ ನಮ್ಮ ಕರ್ತವ್ಯ ಎಂದು ಭಾವಿಸಿ ನೈತಿಕವಾಗಿ ಸ್ವಯಂ ಪ್ರೇರಣೆಯಿಂದ ಮತ ಹಾಕಬೇಕು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಮತಗಟ್ಟೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ಪೌರಾಯುಕ್ತ ಹನುಮಂತರಾಜು, ಡಿಡಿಪಿಐ ರವಿಶಂಕರ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next