ಚಿತ್ರದುರ್ಗ: ಗ್ರಾಮಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಸದಸ್ಯರು ಬುಧವಾರ ತಮ್ಮ ಕೆಲಸ ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ನಿರಂತರವಾಗಿ ತಾರತಮ್ಯಕ್ಕೆ ಒಳಗಾಗುತ್ತಿರುವ ಗ್ರಾಮಲೆಕ್ಕಿಗರ ವೇತನ ಭತ್ಯೆ, ಪ್ರಯಾಣ ಭತ್ಯೆಯನ್ನು ಪರಿಷ್ಕರಿಸಿ ಸಾವಿರ ರೂ.ಗೆ ಏರಿಸಬೇಕು. ಜಾಬ್ ಚಾರ್ಟ್ ಕೂಡಲೇ ನೀಡಬೇಕು. ಮರಳು ಮಾಫಿಯಾದಿಂದ ಹತ್ಯೆಗೊಳಗಾದ ಸಾಹೇಬ್ ಪಾಟೀಲ್ ಅವರ ಕುಟುಂಬಕ್ಕೆ 20 ಲಕ್ಷ ರೂ. ವಿಶೇಷ ಪರಿಹಾರ ನೀಡಬೇಕು. ಗ್ರಾಮ ಸಹಾಯಕರನ್ನು ಕಾಯಂಗೊಳಿಸಬೇಕು. ಕಂದಾಯ ಇಲಾಖೆ ನೌಕರರನ್ನು ಹಾಗೂ ಸಿಬ್ಬಂದಿಯನ್ನು ಅನ್ಯ ಇಲಾಖೆ ಕಾರ್ಯಗಳಿಗೆ ನಿಯೋಜಿಸಬಾರದು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಲವಾರು ಬಾರಿ ಪ್ರತಿಭಟನೆ, ಧರಣಿ ನಡೆಸಿ ನಮ್ಮ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಗ್ರಾಮಲೆಕ್ಕಿಗರಿಗೆ ಕೆಲಸಕ್ಕೆ ತಕ್ಕಂತೆ ವೇತ ಹಾಗೂ ಇತರೆ ಭತ್ಯೆಗಳನ್ನು ನೀಡದೆ ವಂಚಿಸಲಾಗುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗ್ರಾಮಲೆಕ್ಕಿಗರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು. ಇಲ್ಲದಿದ್ದರೆ ಕೆಲಸ ಬಹಿಷ್ಕರಿಸಿ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆಯ ಮೂಲಭೂತ ಕಾರ್ಯಗಳಾದ ಭೂಕಂದಾಯ ವಸೂಲಾತಿ, ಜಮಾಬಂದಿ, ಸಾಮಾಜಿಕ ಭದ್ರತಾ ಯೋಜನೆಗಳು, ಎಜೆಎಸ್ಕೆ ತಂತ್ರಾಂಶದ ಮೂಲಕ ನೀಡುವ ವಿವಿಧ ಪ್ರಮಾಣಪತ್ರಗಳು, ಪಿಟಿಸಿಎಲ್ ಕಾಯ್ದೆಗಳಲ್ಲಿ ವಹಿಸಿರುವ ಕೆಲಸ ಕಾರ್ಯಗಳನ್ನು ಹಾಗೂ ಹಕ್ಕು ಬದಲಾವಣೆ, ಶಿಷ್ಟಾಚಾರ, ಚುನಾವಣಾ ಮತ್ತಿತರ ಅತ್ಯಂತ ಜವಾಬ್ದಾರಿಯುತ ಕೆಲಸಗಳಾಗಿದ್ದು, ಇದಕ್ಕೆ ಅನ್ವಯವಾಗುವಂತೆ ಇದುವರೆಗೂ ಗ್ರಾಮಲೆಕ್ಕಿಗರಿಗೆ ವೇತನ ಶ್ರೇಣಿ ಹಾಗೂ ಅಗತ್ಯ ಭತ್ಯೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ತಾಂತ್ರಿಕೇತರ ಕಾರ್ಯನಿರ್ವಾಹಕ ಸಿಬ್ಬಂದಿಗಳಾದ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಇಂತಹ ತಂತ್ರಾಂಶಗಳ ನಿರ್ವಹಣೆ ಮಾಡುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ತಾಂತ್ರಿಕ ಜ್ಞಾನವಿಲ್ಲದೆ ಹಾಗೂ ತಾಂತ್ರಿಕ ದೋಷದಿಂದ ಉಂಟಾಗುವ ಲೋಪಗಳಿಗೆ ಕ್ಷೇತ್ರ ಕಾರ್ಯಗಳಲ್ಲಿನ ಅಡಚಣೆಗಳಿಗೆ ವಿನಾಕಾರಣ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಶಿಸ್ತುಕ್ರಮದ ಬೆದರಿಕೆ ಒಡ್ಡಿ ಶಿಸ್ತುಕ್ರಮ ಜರುಗಿಸಿರುವುದನ್ನು ಕೂಡಲೇ ಕೈಬಿಡಬೇಕೆಂದು ತಿಳಿಸಿದರು.
ಜಿಲ್ಲಾ ಕಂದಾಯ ನೌಕರರ ಸಂಘದ ಗೌರವಾಧ್ಯಕ್ಷ ಕರಿಯಪ್ಪ, ಜಿಲ್ಲಾಧ್ಯಕ್ಷ ಆರ್. ಲಕ್ಷ್ಮೀಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಗಂಗಾಧರ, ಉಪಾಧ್ಯಕ್ಷ ಎಂ. ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ಆರ್. ರಂಗನಾಥ್, ಖಜಾಂಚಿ ಜೈರಾಮ್, ರಾಜ್ಯ ಪರಿಷತ್ ಸದಸ್ಯರಾದ ಕೆ. ಶ್ರೀನಿವಾಸ್, ಇರ್ಫಾನ್, ನಿರ್ದೇಶಕರಾದ ಪಾಂಡುರಂಗಪ್ಪ, ಜಿ.ಎಸ್. ಸುರೇಶ್, ಕರಿಬಸವನಗೌಡ, ಮಂಜುನಾಥ್, ಇಮ್ರಾನ್, ಹುಲುಗಪ್ಪ, ಆನಂದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.