Advertisement

ರೋಗ ನಿಯಂತ್ರಿಸುವಲ್ಲಿ ಪಶು ಇಲಾಖೆ ವಿಫಲ

01:36 PM Nov 13, 2019 | Naveen |

ಚಿತ್ರದುರ್ಗ: ತುರುವನೂರು ಹೋಬಳಿಯಲ್ಲಿ ವಿಚಿತ್ರ ರೋಗಕ್ಕೆ ಕಳೆದ ಹಲವು ದಿನಗಳಿಂದ ಸುಮಾರು 500 ಕುರಿಗಳು ಬಲಿಯಾಗಿವೆ. ಇದಕ್ಕೆ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಸರ್ಕಾರದಿಂದ ಪರಿಹಾರವೂ ಬರುತ್ತಿಲ್ಲ ಎಂದು ಆರೋಪಿಸಿ ಕುರಿಗಾಹಿಗಳು ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಬಳಿ ಸತ್ತ ಕುರಿಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕುರಿಗಾಹಿಗಳು, ವಿಚಿತ್ರ ರೋಗಕ್ಕೆ ಪ್ರತಿ ದಿನ ಕುರಿಗಳು ಸಾಯುತ್ತಿವೆ. ಈ ರೋಗ ನಿಯಂತ್ರಣಕ್ಕೆ ಪಶು ವೈದ್ಯರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಶು ವೈದ್ಯಕೀಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿಯ ಹುಣಸೆಕಟ್ಟೆ, ಕೂನಬೇವು ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ್ದ ಕುರಿಗಾಹಿಗಳು, ರೋಗ ನಿವಾರಣೆಗೆ ಹಾಕಿದ ಶ್ರಮ ಫಲ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಯವರಲ್ಲಿ ಅಳಲು ತೋಡಿಕೊಂಡರು.

ಕುರಿ ಸಾಕಾಣಿಕೆಯನ್ನು ಪ್ರಮುಖ ಕಸುಬು ಮಾಡಿಕೊಂಡು ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಪ್ರತಿ ಮನೆಯಲ್ಲಿ 10 ರಿಂದ 200 ಕುರಿಗಳಿವೆ. ಒಂದು ತಿಂಗಳಿಂದ ಕಾಣಿಸಿಕೊಂಡಿರುವ ಈ ರೋಗಕ್ಕೆ ನೂರಾರು ಕುರಿ ಬಲಿಯಾಗಿವೆ. ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ ಎಂದರು.

ಹಿಂದೆ ಕಾಲುಬಾಯಿ ಜ್ವರ ಮಾತ್ರ ಬರುತ್ತಿತ್ತು. ಕೆಲವೇ ದಿನಗಳಲ್ಲಿ ಈ ಕಾಯಿಲೆ ನಿಯಂತ್ರಣವಾಗುತ್ತಿತ್ತು. ಆದರೆ ಈಗ ಕಾಣಿಸಿಕೊಂಡಿರುವ ಹೊಸ ರೋಗದಿಂದ ತತ್ತರಿಸಿ ಹೋಗಿದ್ದೇವೆ. ಜೊಲ್ಲು ಸುರಿಸಲು ಆರಂಭಿಸಿದ ಕುರಿಗೆ ಭೇದಿ ಕಾಣಿಸಿಕೊಳ್ಳುತ್ತದೆ. ಕೆಲವೇ ದಿನಗಳಲ್ಲಿ ಈ ಕುರಿ ಸಾವನ್ನಪ್ಪುತ್ತಿದೆ ಎಂದು ಹುಣಸೆಕಟ್ಟೆ ಚಂದ್ರಣ್ಣ ಹೇಳಿದರು.

Advertisement

ಕೂನಬೇವು ಗ್ರಾಮದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ವೈದ್ಯರೇ ಇಲ್ಲ. ದೂರದ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ದುಬಾರಿ ಬೆಲೆ ಕೊಟ್ಟು ಔಷಧ ನೀಡಿದ್ದೇವೆ. ಪಶುವೈದ್ಯಕೀಯ ಇಲಾಖೆ ಉಚಿತವಾಗಿ ನೀಡುವ ಔಷಧವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಉಚಿತವಾಗಿ ಲಭ್ಯವಿರುವ ಔಷಧ ಕುರಿಗಾಹಿಗಳನ್ನು ನೇರವಾಗಿ ತಲುಪುತ್ತಿಲ್ಲ. ಕುರಿಗಳನ್ನು ಉಳಿಸಿಕೊಳ್ಳುವ ಕಾರಣಕ್ಕೆ ದುಬಾರಿ ಬೆಲೆ ತೆತ್ತು ಔಷಧ  ಖರೀದಿಸಿರುವ ರಸೀದಿ ಹಾಗೂ ಅಂಗಡಿಯ ಹೆಸರುಗಳನ್ನು ರೈತರು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

ರೈತ ಸಂಘದ ಪ್ರಧಾನ ರಾಜ್ಯ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಮುಖಂಡರಾದ ಧನಂಜಯ, ಬಿ. ವೆಂಕಟೇಶ್‌, ಕೆ.ಪಿ. ತಿಪ್ಪೇಸ್ವಾಮಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next