ಹೊಳಲ್ಕೆರೆ: ಏಕಾಗ್ರತೆಯನ್ನು ಯಾರು ಒಲಿಸಿಕೊಳ್ಳುತ್ತಾರೆಯೋ ಅಂಥವರು ಮಹಾನ್ ವ್ಯಕ್ತಿಗಳಾಗುತ್ತಾರೆ. ಏಕಾಗ್ರತೆ ಅಂದರೆ ಓದು, ಬರವಣಿಗೆ, ಕರ್ತವ್ಯ, ಧರ್ಮಪಾಲನೆ. ಅವುಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಲು ಬೇಕಾಗಿರುವ ಸ್ಥಿತಿಯೇ ಏಕಾಗ್ರತೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮರುಘಾಮಠ ಹಾಗೂ ಚಿಕ್ಕಜಾಜೂರು ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಆಯೋಜಿಸಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
2600 ವರ್ಷಗಳ ಹಿಂದೆ ಇದ್ದ ಬುದ್ಧನ ಹೆಸರು ಇಂದಿಗೂ ಉಳಿದಿದೆ. ಅದಕ್ಕೆ ಕಾರಣ ಅವರ ನಿರಂತರವಾದ ಪರಿಶುದ್ಧ ಏಕಾಗ್ರತೆ. ಪ್ರತಿಯೊಬ್ಬರು ಏಕಾಗ್ರತೆಯನ್ನು ಹೊಂದಬೇಕು. ಆಗ ಮಾತ್ರ ಸಮಾಜದ ಕಲ್ಯಾಣಕ್ಕೆ ಚಿಂತನೆ ಮಾಡಲು ಸಾಧ್ಯ. ಸಾಮಾಜಿಕವಾಗಿ ವ್ಯವಸ್ಥೆಯಲ್ಲಿ ಸಾಕಷ್ಟು ಕಂದಕಗಳಿವೆ. ಅವುಗಳನ್ನು ಹೊಗಲಾಡಿಸುವ ಕೆಲಸ ಆಗಬೇಕು. ಅದನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಾಡಿದ್ದಾನೆ. ಅವುಗಳನ್ನು ಬಸವ ತತ್ವ ಎಂದು ಕರೆಯುವ ನಾವು ಬಸವಣ್ಣನ ಚಿಂತನೆಯನ್ನು ಅನುಸರಿಸುವ ಕೆಲಸ ಮಾಡಲು ಏಕಾಗ್ರತೆ ಬೇಕೆಂದರು.
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ನಿರಂತರ ಪ್ರಯತ್ನ, ಹೋರಾಟ ಮಾಡಬೇಕಿದೆ. ಮನುಷ್ಯನ ಮೆದುಳು ಸಾಮಾನ್ಯವಾದುದಲ್ಲ. ಅದು ವಿಪರಿತ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಚಂದ್ರಯಾನದಂತಹ ಮಹತ್ಸಾಧನೆ ನಮ್ಮ ಎದುರಿಗಿದೆ. ನಾವು ಎಂದೂ ದುರ್ಬಲರಲ್ಲ, ಸಂಕೋಲೆಗಳಿಗೆ ಸಿಕ್ಕಿ ದುರ್ಬಲರು ಎನ್ನುವ ಮನೋಭಾವನೆ ಬೆಳೆಸಿಕೊಳ್ಳದೆ ಸಾಧನೆಯ ಹಾದಿಯಲ್ಲಿ ಸಾಗಿದಾಗ ಎಲ್ಲರಿಗಿಂತ ಪ್ರಬಲರಾಗಬಹುದು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಸಿದ್ದವ್ವನಹಳ್ಳಿ ವೀರೇಶ್‌ಕುಮಾರ್, ಇಂದು ಮಾನವ ಉತ್ತಮನಾಗಲು ಶಿಕ್ಷಣ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದಾನೆ. ಇದು ಮಾನವನನ್ನು ಹೊರತುಪಡಿಸಿ ಇನ್ನಿತರೆ ಯಾವ ಜೀವಿಗಳಲ್ಲೂ ಇಲ್ಲ. ಆದರೂ ಮಾನವ ದುಷ್ಕೃತ್ಯಗಳಲ್ಲಿ ತೊಡಗಿದ್ದಾನೆ. ಒಳ್ಳೆಯ ವಿಚಾರಗಳಲ್ಲಿ ಮಾನವರಿಗೆ ಏಕಾಗ್ರತೆ ಇರಬೇಕು. ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಸೇರಿದಂತೆ ಇನ್ನೂ ಹಲವಾರು ಹೆಸರನ್ನು ನಾವು ಸ್ಮರಿಸಲು ಕಾರಣ ಅವರ ಕಾಯಕ, ಏಕಾಗ್ರತೆ, ಇಷ್ಟಲಿಂಗದಲ್ಲಿ ಅವರು ಏಕಾಗ್ರತೆಯನ್ನು ಕೇಂದ್ರಿಕರಿಸಿದ್ದು. ಏಕಾಗ್ರತೆ ಬದುಕಿಗೆ ಹಾಗೂ ಸಾಧನೆಗೆ ಅವಶ್ಯಕವಾಗಿದೆ ಎಂದರು.
ಚಿಕ್ಕಜಾಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಸಿ. ಮೋಹನ್ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುತ್ತ ಅರಿವಿನ ಮಟ್ಟವನ್ನು ಹೆಚ್ಚಿಸುವ ‘ಕಲ್ಯಾಣ ದರ್ಶನ’ ಕಾರ್ಯಕ್ರಮ ಅತ್ಯಂತ ಮಹತ್ವದ್ದು. ಶ್ರಾವಣ ಮಾಸದಲ್ಲಿ ಕಲ್ಯಾಣ ದರ್ಶನದ ಮೂಲಕ ಮುರುಘಾ ಶರಣರು ನಮ್ಮ ಬದುಕನ್ನು ಸುಧಾರಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಂ. ಶಿವಕುಮಾರ್, ತಾಲೂಕು ಪಂಚಾಯತ್ ಸದಸ್ಯ ಪಿ.ಎಸ್. ಮೂರ್ತಿ, ಸಿಪಿಐ ರವೀಶ್, ಪಿಎಸ್‌ಐ ಮಧು, ಗ್ರಾಮ ಪಂಚಾಯತ್ ಸದಸ್ಯರಾದ ಎಸ್. ಸಿದ್ದೇಶ್, ಜಿ.ಕೆ. ಯೋಗೀಶ್, ಎಚ್. ಜಯದೇವಮೂರ್ತಿ, ಷಣ್ಮುಖಪ್ಪ, ಅಂಜಲಿ ಮೋಹನ್, ಕವಿತಾ ಗಂಗಾಧರ, ಮೀನಾಕ್ಷಿ, ಗಿರಿಜಮ್ಮ, ಅಸ್ಮತ್‌ಉನ್ನೀಸಾ, ಮೇರಿ ರೋಸ್ಲಿ ಕುಮಾರ್, ಲಕ್ಷ್ಮೀದೇವಿ, ಮುಖಂಡ ಎಚ್.ಎಂ. ದಯಾನಂದ ಮೊದಲಾದವರು ಪಾಲ್ಗೊಂಡಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ‘ಕಲ್ಯಾಣ ದರ್ಶನ’ದ ಅಂಗವಾಗಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಚಿತ್ರದುರ್ಗದ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಸ್.ಜೆ.ಎಂ ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 32 ವೈದ್ಯರ ತಂಡ ಚಿಕ್ಕಜಾಜೂರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿತು.