Advertisement

ಚಿರತೆ ಹತ್ಯೆಗೈದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

11:57 AM Jul 05, 2019 | Naveen |

ಚಿತ್ರದುರ್ಗ: ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಸಾರ್ವಜನಿಕರು ಕಲ್ಲು, ದೊಣ್ಣೆಗಳಿಂದ ಚಿರತೆಯನ್ನು ಹೊಡೆದು ಸಾಯಿಸಿರುವುದನ್ನು ಖಂಡಿಸಿ ವಂದೇಮಾತರಂ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಸಿಎಫ್‌ ರಾಘವೇಂದ್ರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಜನರು ಚಿರತೆ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ತೋಟದ ಕೆಲಸಕ್ಕೆ ಬಂದಿದ್ದ ದೇವಿರಮ್ಮ ಮತ್ತು ಅನಿಲ್ಕುಮಾರ್‌ ಮೇಲೆ ಬುಧವಾರ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದರೂ ಬೇಗನೆ ಬಾರದ ಕಾರಣ ಗ್ರಾಮಸ್ಥರೆಲ್ಲ ಸೇರಿಕೊಂಡು ಪೊದೆಯಿಂದ ಹೊರ ಬಂದ ಚಿರತೆಯನ್ನು ಹೊಡೆದು ಕೊಂದು ಹಾಕಿದ್ದಾರೆ. ಕಾಡುಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿದೆ. ಹಾಗಾಗಿ ಚಿರತೆಯ ಪ್ರಾಣ ತೆಗೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

2016ರಲ್ಲಿ ಹೊಸದುರ್ಗದಲ್ಲಿ ಇದೇ ರೀತಿ ಕರಡಿಯೊಂದನ್ನು ಅರಣ್ಯಾಧಿಕಾರಿಗಳ ಮುಂದೆಯೇ ಹೊಡೆದು ಸಾಯಿಸಲಾಗಿತ್ತು. ಹೊಳಲ್ಕೆರೆ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಕರಡಿ ಮರವೇರಿ ಕುಳಿತಾಗ ಜನರು ಪೆಟ್ರೋಲ್, ಸೀಮೆಎಣ್ಣೆ ಸುರಿದು ಮರದ ಬುಡಕ್ಕೆ ಬೆಂಕಿ ಹಚ್ಚಿದ್ದರು. ಅರ್ಧಂಬರ್ಧ ಸುಟ್ಟ ಗಾಯಗಳಾಗಿದ್ದ ಕರಡಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿತು. ಹೊಳಲ್ಕೆರೆ ಸಮೀಪ ಎರಡು ಕರಡಿಗಳನ್ನು ಕೊಲ್ಲಲಾಯಿತು. ಚಳ್ಳಕೆರೆಯಲ್ಲಿ ಚಿರತೆ ಬಲೆಗೆ ಬಿದ್ದರೂ ಅರಣ್ಯಾಧಿಕಾರಿಗಳ ಮುಂದೆ ಸಾರ್ವಜನಿಕರು ಹೊಡೆದು ಸಾಯಿಸಿದರು. ಚಿತ್ರದುರ್ಗದ ಆಡುಮಲ್ಲೇಶ್ವರದಲ್ಲಿರುವ ಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದರಿಂದ ಒಂದು ಕರಡಿ ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಜಿಂಕೆಗಳಿಗೆ ಆಗಾಗ ಚರ್ಮ ರೋಗ ಕಾಣಿಸಿಕೊಳ್ಳುತ್ತಿದೆ. ಇಷ್ಟೆಲ್ಲಾ ಕಾಡುಪ್ರಾಣಿಗಳು ಹತ್ಯೆಯಾಗಲು ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರುಬರಹಳ್ಳಿಯಲ್ಲಿ ಚಿರತೆ ಸಾಯಿಸಿದವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಂದೇಮಾತರಂ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಹನುಮಂತರಾಯ ಚೌಳೂರು, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮಾಂತರ ಕಾರ್ಯದರ್ಶಿ ರವಿ ಕಳ್ಳೀರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ತಾಲೂಕು ಯುವ ಅಧ್ಯಕ್ಷ ಟಿ. ಚೌಡೇಶ್‌, ವಿದ್ಯಾರ್ಥಿ ಘಟಕದ ರಾಮು, ಧನರಾಜ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆ ಮಾಡೋಕೆೆ ಅನುಮತಿ ಕೊಟ್ಟವರ್ಯಾರು?
ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದರಿಂದ ಕುಪಿತಗೊಂಡ ಎಸಿಎಫ್‌ ರಾಘವೇಂದ್ರ ಮಾತಿನ ಚಕಮಕಿಗೆ ಇಳಿದರು. ಅನುಮತಿಯಿಲ್ಲದೆ ಏಕಾಏಕಿ ಕಚೇರಿಗೆ ಬಂದು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ನಿಮಗೆ ಅನುಮತಿ ಕೊಟ್ಟವರಾರು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದರಿಂದ ಕೆಂಡಾಮಂಡಲರಾದ ವಂದೇಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್‌, ಕಾಡುಪ್ರಾಣಿಗಳನ್ನು ಹೊಡೆದು ಸಾಯಿಸುತ್ತಿರುವವರಿಗೆ ಅನುಮತಿ ಕೊಟ್ಟವರು ಯಾರು ಎಂದು ಅರಣ್ಯಾಧಿಕಾರಿಗೆ ತಿರುಗೇಟು ನೀಡಿದರು. ಅನುಮತಿ ಪಡೆದು ಅರಣ್ಯ ಇಲಾಖೆ ಕಚೇರಿಗೆ ಬರಬೇಕಿತ್ತು. ಪೊಲೀಸರನ್ನು ಕರೆಸಿ ನಿಮ್ಮನ್ನು ಹೊರಗೆ ತಳ್ಳಿಸುತ್ತೇನೆಂದು ಎಸಿಎಫ್‌ ಬೆದರಿಕೆ ಹಾಕಿದರು. ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು, ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಯಾರ ಅನುಮತಿಯೂ ಬೇಕಿಲ್ಲ. ನಮ್ಮ ವೇದಿಕೆ ಇರುವುದೇ ಅನ್ಯಾಯದ ವಿರುದ್ಧ ಹೋರಾಡಲು ಎಂದು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಅಲ್ಲಿದ್ದ ಕೆಲವರು ಇಬ್ಬರನ್ನೂ ಸಮಾಧಾನಪಡಿಸಿದರು. ನಂತರ ಅರಣ್ಯಾಧಿಕಾರಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next