ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದಲೇ ಎಲ್ಲ ರೀತಿಯ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅಧಿಸೂಚನೆ ಹೊರಡಿಸಿದ್ದಾರೆ. ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಗೂ ಜೂನ್ 20ರ ಮಾರ್ಗಸೂಚಿ ಕ್ರಮಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿರುವ ಚಟುವಟಿಕೆಗಳಿಗೆ ವಿನಾಯಿತಿ ನೀಡಿದ್ದು, ಈ ಆದೇಶ ಜಿಲ್ಲೆಯಾದ್ಯಂತ ಜುಲೈ 5ರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿ ಇರಲಿದೆ. ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಲ್ಲಿ ವಿನಾಯಿತಿ ನೀಡಿರುವ ಚಟುವಟಿಕೆಗಳಿಗೆ ನಿಗತ ಅವ ಧಿಯಾದ ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಕೋವಿಡ್-19 ನಿಯಮಾಳಿಗಳನ್ನು ಪಾಲಿಸಿಕೊಂಡು ನಿರ್ವಹಿಸಲು ಅನುಮತಿ ನೀಡಲಾಗಿದೆ.
ಪ್ರತಿ ದಿನ ಸಂಜೆ 7 ರಿಂದ ಮರುದಿನ ಮುಂಜಾನೆ 5 ರವರೆಗೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯಕ್ಕೆ ರಾತ್ರಿ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಅತ್ಯಾವಶ್ಯಕ ಸೇವೆಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ನಿರ್ವಹಿಸಲು ಅನುಮತಿಸಲಾಗಿದೆ. ಸಿ.ಆರ್.ಪಿ.ಸಿ ಸೆಕ್ಷನ್ 144 ಅಡಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ವೈಯಕ್ತಿಕ ಒಡಾಟ, ಅನಿವಾರ್ಯವಲ್ಲದ ಚಟುವಟಿಕೆಗಳನ್ನು ನಿಷೇ ಧಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಭಾರತೀಯ ದಂಡ ಸಂಹಿತೆಯನ್ವಯ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿರುವ ವಿವಿಧ ವಲಯವಾರು ಚಟುವಟಿಕೆಗಳ ನಿರ್ಬಂಧಗಳ ಬಗ್ಗೆ ಆದೇಶವನ್ನು ಪರಿಣಾಮಕಾರಿ ಜಾರಿಗೊಳಿಸಿ, ನಿಯಮಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾ ಧಿಕಾರದ ಅಧ್ಯಕ್ಷರಾದ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಸಂಜೆ 5 ಗಂಟೆವರೆಗೆ ವ್ಯಾಪಾರ-ವಹಿವಾಟು : ಸರ್ಕಾರದ ಮಾರ್ಗಸೂಚಿಯಂತೆ 14 ದಿನಗಳ ಕಾಲ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಬೆಳಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದ್ದಾರೆ. ಅಂಗಡಿ, ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಶೇ. 50 ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು. ಈ ಎಲ್ಲಾ ಕಡೆಗಳಲ್ಲಿ ಎಸಿ ಉಪಯೋಗಿಸಬಾರದು. ಇಂದಿನಿಂದ ಜಿಲ್ಲೆಯಲ್ಲಿ ಎಲ್ಲಾ ತರಹದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.