Advertisement

ಕ್ಷಯ ನಿರ್ಮೂಲನೆಗೆ ಸಮುದಾಯದ ಸಹಕಾರ ಅಗತ್ಯ

03:39 PM Mar 12, 2020 | Naveen |

ಚಿತ್ರದುರ್ಗ: ಕ್ಷಯರೋಗ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯ. ಇದರಿಂದ ತ್ವರಿತವಾಗಿ ರೋಗ ನಿರ್ಮೂಲನೆ ಸಾಧ್ಯ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾ ಧಿಕಾರಿ ಡಾ| ರಂಗನಾಥ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಘಟಕ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಷಯರೋಗ ಪ್ರತಿ ನಾಲ್ಕು ನಿಮಿಷಕ್ಕೊಂದು ಜೀವ ಬಲಿ ಪಡೆಯುತ್ತಿದ್ದು, ಎಲ್ಲ ರೋಗಗಳಿಗಿಂತ ಅಪಾಯಕಾರಿಯಾಗಿದೆ. ಇದನ್ನು ತಡೆಗಟ್ಟುವ ಅನಿವಾರ್ಯತೆ ಇದೆ. ಕ್ಷಯವನ್ನು ಶೇ. 100ರಷ್ಟು ಗುಣಪಡಿಸಬಹುದಾಗಿದೆ. ಕಫದಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಕಡಿಮೆ. ಕ್ಷಯ ಮುಕ್ತ ಭಾರತಕ್ಕಾಗಿ ಹೊಸ ಅವಿಷ್ಕಾರಗಳ ಮೂಲಕ ಕ್ಷಯರೋಗ ನಿರ್ಮೂಲನೆಗೆ ಸರ್ಕಾರ ಸಜ್ಜಾಗಿದೆ.

ಮೂರು ಲಕ್ಷ ಜನರಿರುವ ಪ್ರದೇಶವನ್ನು ಅತಿ ಸೂಕ್ಷ್ಮ ಗುಂಪು ಎಂದು ಗುರುತಿಸಲಾಗಿದೆ. ಸಮಗ್ರ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಅಂದೋಲನದಲ್ಲಿ 2019 ರ ಡಿಸೆಂಬರ್‌ನಲ್ಲಿ 52 ಪ್ರಕರಣಗಳನ್ನು ಗುರುತಿಸಲಾಗಿದೆ. 2025ರೊಳಗೆ ಭಾರತವನ್ನು ಕ್ಷಯರೋಗ ಮುಕ್ತವನ್ನಾಗಿಸಲು ಸಂಕಲ್ಪ ಮಾಡಲಾಗಿದೆ ಎಂದರು. ಎಚ್‌ಐವಿ ಸೋಂಕಿತರಲ್ಲಿ ಕ್ಷಯರೋಗ ಪ್ರಮಾಣ ಶೇ.8 ರಿಂದ 3.5ಕ್ಕೆ ಇಳಿಮುಖವಾಗಿದೆ. ಅಲ್ಲದೆ ಮಧುಮೇಹ ರೋಗಿಗಳಲ್ಲಿ ಕ್ಷಯರೋಗದ ಪ್ರಮಾಣ ಕಡಿಮೆಯಾಗುವತ್ತ ವೈದ್ಯಾಧಿಕಾರಿಗಳು ಗಮನಹರಿಸಬೇಕು. ಕಫ ಪರೀಕ್ಷೆಯ ಮೂಲಕ ಹೆಚ್ಚು ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಿ ಗುಣಪಡಿಸಲು ಸಹಕರಿಸಬೇಕು ಎಂದು ಆಯುಷ್‌ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಕೆ.ಎಲ್‌. ವಿಶ್ವನಾಥ್‌ ಮಾತನಾಡಿ, ಕ್ಷಯರೋಗ ತ್ವರಿತವಾಗಿ ಹಬ್ಬುತ್ತದೆ. ಕೆಲವೊಮ್ಮೆ ರೋಗಿಯು ಚಿಕಿತ್ಸೆ ಪಡೆಯುವ ಮೊದಲೇ ನೂರಾರು ಜನಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವೆಲ್ಲರೂ ಈ ಕಾಯಿಲೆ ನಿರ್ಮೂಲನೆ ಮಾಡಲು ಕೈಜೋಡಿಸಬೇಕು. ಆಯುಷ್‌ ಔಷಧ ಪದ್ಧತಿಯಲ್ಲಿನ ವಾತ, ಪಿತ್ತ ಹಾಗೂ ಕಫ ಈ ಮೂರು ಅಂಶಗಳ ಆಧಾರದ ಮೇಲೆ ಚಿಕಿತ್ಸೆ ನೀಡಿ ಕ್ಷಯರೋಗ ನಿರ್ಮೂಲನೆ ಮಾಡುವುದರ ಕುರಿತು ಹಿರಿಯ ಅಧಿಕಾರಿಗಳಿಗೆ ಪ್ರಸ್ತಾಪಿಸುವಂತೆ ಸಲಹೆ ನೀಡಿದರು. ನೊವೆಲ್‌ ಕೊರೋನಾ ವೈರಸ್‌ ಹರಡುವ ಬಗ್ಗೆ ರೋಗದ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು, ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು. ನೋಡಲ್‌ ಅಧಿಕಾರಿ ಡಾ| ಬಿ. ಶ್ರೀಕಾಂತ್‌ ಮಾತನಾಡಿ, 2030 ರೊಳಗಾಗಿ ಕ್ಷಯರೋಗ ನಿರ್ಮೂಲನೆ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರಿ ನಿಗದಿಪಡಿಸಿದೆ.

Advertisement

ಭಾರತ 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತ್ವರಿತ ಕಾರ್ಯ ಕೈಗೊಳ್ಳುತ್ತಿದೆ. ಈ ಕುರಿತು ವೈದ್ಯರು ಹೆಚ್ಚು ಸಹಕರಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next