Advertisement

ಮಧ್ಯಸ್ಥಿಕೆ ವ್ಯವಸ್ಥೆ ಅರಿವು ಮೂಡಿಸಿ: ನ್ಯಾ|ಬಿಲ್ಲಪ್ಪ

11:59 AM Jun 24, 2019 | Naveen |

ಚಿತ್ರದುರ್ಗ: ರಾಜಿ ಸಂಧಾನ ಹಾಗೂ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಲು ಕಾನೂನು ತೊಡಕಿಲ್ಲ. ಮಧ್ಯಸ್ಥಿಕೆ ಮೂಲಕ ವಿವಾದ ಇತ್ಯರ್ಥ ಮಾಡಿಕೊಳ್ಳುವುದರಿಂದ ಸಮಯ, ಹಣ ಎರಡೂ ಉಳಿಯಲಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.

Advertisement

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ನ್ಯಾಯಾಧೀಶರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯಸ್ಥಿಕೆ ವ್ಯವಸ್ಥೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹಿಂದೆ ವಿವಿಧ ವ್ಯಾಜ್ಯಗಳ ಪರಿಹಾರಕ್ಕಾಗಿ ಮಧ್ಯಸ್ಥಿಕೆ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಇದೊಂದು ಸ್ಪಷ್ಟ ಪ್ರಕ್ರಿಯೆಯಾಗಿದ್ದು, ಕಕ್ಷಿದಾರರನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಆಹ್ವಾನಿಸಿ ತಿಳಿ ಹೇಳುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದರು.

ಒಳ್ಳೆಯ ಸಂದೇಶಗಳನ್ನು ಕಕ್ಷಿದಾರರಿಗೆ ತಲುಪಿಸುವ ಕೆಲಸ ಮಧ್ಯಸ್ಥಿಕೆ ಕೇಂದ್ರದಿಂದ ಆಗಬೇಕು. ಜನರಿಗೆ ನ್ಯಾಯ ಸಿಗಬೇಕಾದರೆ ಮಧ್ಯಸ್ಥಿಕೆ ಕೇಂದ್ರದಲ್ಲಿ ಅವರ ಸಂಬಂಧಿಗಳನ್ನು ಮತ್ತು ಆತ್ಮೀಯರನ್ನು ವಿಚಾರಣೆಗೆ ಕರೆದು ಮಾತನಾಡಿದರೆ ಶೀಘ್ರ ಪ್ರಕರಣಗಳು ಇತ್ಯರ್ಥವಾಗುತ್ತವೆ. ನ್ಯಾಯಾಲಯಗಳಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಬಗ್ಗೆ ಜನರಲ್ಲಿ ಅರಿವು ಹಾಗೂ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಜನರಿಗೆ ವಿಶ್ವಾಸ ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಧೀಶ ಎಸ್‌.ವೈ. ವಟವಟಿ ಮಾತನಾಡಿ, ಮಧ್ಯಸ್ಥಿಕೆ ಕೇಂದ್ರದಲ್ಲಿ ಶೇ. 100 ರಷ್ಟು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ, ಆದರೆ ಶೇ. 50 ರಷ್ಟು ನ್ಯಾಯಾಲಯದಲ್ಲಿ ಹಾಗೂ ಉಳಿದ ಶೇ. 50 ರಷ್ಟು ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರದಲ್ಲಿ ವಿವಾದಗಳನ್ನು ಬಗೆಹರಿಸಿದರೆ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುವುದಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಗಂಡ-ಹೆಂಡತಿ ವ್ಯಾಜ್ಯ ಸೇರಿದಂತೆ ಮತ್ತಿತರ ಕೆಲವು ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರದಲ್ಲಿ ಅತಿ ಸೂಕ್ಷ್ಮವಾಗಿ ಗಮನಿಸಬೇಕು. ಗಂಡ-ಹೆಂಡತಿ ಜಗಳದಲ್ಲಿ ರಾಜಿ ಮಾಡಿಸುವುದು ಕಷ್ಟದ ಕೆಲಸ. ಇಂತಹ ಕೆಲಸವನ್ನು ಮಧ್ಯಸ್ಥಿಕೆ ಕೇಂದ್ರದಲ್ಲಿ ಮಾಡಬೇಕು. ಅಂತಹ ಕಾರ್ಯಗಳಲ್ಲಿ ನ್ಯಾಯವಾದಿಗಳು, ಕಕ್ಷಿದಾರರ ಸಹಕಾರ ಅಗತ್ಯ ಎಂದರು.

ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಧೀಶ ಅಂಬಾದಾಸ್‌ ಜಿ. ಕುಲಕರ್ಣಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಗಂಡ-ಹೆಂಡತಿಯರ ಸಂಬಂಧಗಳು ಕ್ಷಿಣಿಸುತ್ತಿವೆ. ಇಂದಿನ ದಿನಮಾನಗಳಲ್ಲಿ ಹಣ ಎಂಥವರನ್ನೂ ಬಾಯಿ ಬಿಡಿಸುತ್ತದೆ. ಗಂಡ-ಹೆಂಡತಿ ಸಂಬಂಧದ ಪಾವಿತ್ರ್ಯತೆ ಹಾಳಾಗುತ್ತಿದೆ. ಬಿರುಕುಗೊಂಡ ಸಂಬಂಧಗಳನ್ನು ಮಧ್ಯಸ್ಥಿಕೆ ಕೇಂದ್ರಗಳು ಬೆಸೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಂದನೇ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧಿಧೀಶ ಬಿ.ಎಸ್‌. ಚೇಗರೆಡ್ಡಿ, ಹಿರಿಯ ಸಿವಿಲ್ ನ್ಯಾಯಾಧಿಧೀಶ ಟಿ. ಶಿವಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಮಂಜುಳಾ ಎನ್‌. ತೇಜಸ್ವಿ, ಮಮತಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next