ಚಿತ್ರದುರ್ಗ: ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದು ಜನರ ಕೈಯಲ್ಲಿದೆ. ಗ್ರಾಮ ಹಾಗೂ ನಗರಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವಕರು, ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಕೆ. ಅನಂತ್ ಕರೆ ನೀಡಿದರು.
ನಗರದ ಐಎಂಎ ಹಾಲ್ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವಾಸ್ ಹಾಗೂ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸದಸ್ಯರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಜೀವನ ನಡೆಸಲು ಹಾಗೂ ಅಭಿವೃದ್ಧಿಯತ್ತ ಸಾಗಲು ನಾಲ್ಕು ಅಂಶಗಳಾದ ಶಿಕ್ಷಣ, ಆರೋಗ್ಯ, ಭೂಮಿ ಮತ್ತು ಬಂಡವಾಳ ಪ್ರಮುಖವಾಗಿವೆ. ಅವುಗಳಲ್ಲಿ ಆರೋಗ್ಯ ಬಹಳ ಮುಖ್ಯ. ಆರೋಗ್ಯವೊಂದಿದ್ದರೆ ಉಳಿದ ಮೂರು ಅಂಶಗಳು ನಮ್ಮೆಡೆಗೆ ಬರುತ್ತವೆ. ಸರ್ಕಾರಿ ಕಾರ್ಯಕ್ರಮಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಬೇಕು ಎಂದರು.
ಒಂದು ಗ್ರಾಮದ ಸ್ವಚ್ಛತೆ ಅಲ್ಲಿನ ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳ ಕೈಯಲ್ಲಿರುತ್ತದೆ. ಸ್ವಚ್ಛತೆಗಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಶುದ್ಧ ನೀರಿನ ಘಟಕದ ಸದ್ಬಳಕೆ ಆಗಬೇಕು. ಸಮುದಾಯದ ಜೊತೆಯಲ್ಲಿ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಜನರು ಸ್ವಚ್ಛತೆ ಬಗ್ಗೆ ಗಮನ ಹರಿಸಿ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ ಮಾತನಾಡಿ, ‘ಎಲ್ಲೆಡೆ ಆರೋಗ್ಯ ಎಲ್ಲೆಡೆ ವಿಶ್ವಾಸ’ ಎಂಬ ಘೋಷವಾಕ್ಯದೊಂದಿಗೆ ಆರೋಗ್ಯ ವೃದ್ಧಿಸುವ ಸಲುವಾಗಿ ವಿಶ್ವಾಸ್(ಗ್ರಾಮೀಣ ಪ್ರದೇಶಾಧಾರಿತ ಆರೋಗ್ಯ, ಜಲ ಮತ್ತು ನೈರ್ಮಲ್ಯ ಸಹಕ್ರಿಯೆಯ ಉಪಕ್ರಮ) ಎಂಬ ಯೋಜನೆಯನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಸ್ಥಳೀಯವಾಗಿ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 81 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 11 ಸಮುದಾಯ ಆರೋಗ್ಯ ಕೇಂದ್ರಗಳು, ಒಂದು ಜಿಲ್ಲಾಸ್ಪತ್ರೆ ಮತ್ತು 347 ಉಪಕೇಂದ್ರಗಳಿವೆ. ಇವುಗಳು ಶುದ್ಧ ನೀರು, ಗಾಳಿ, ಆಹಾರ ಮತ್ತು ನೈರ್ಮಲ್ಯದ ಕಡೆಗೆ ಹೆಚ್ಚು ಒತ್ತು ನೀಡುತ್ತಿವೆ. ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಸಮುದಾಯ, ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಗಿರೀಶ್, ಐನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಕರಿಯಪ್ಪ, ಜಿಲ್ಲಾ ಕುಟುಂಬ ಕಲ್ಯಾಣ ಯೋಜನಾಧಿಕಾರಿ ಡಾ| ಸುಧಾ, ಡಾ| ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಇದ್ದರು. ತರಬೇತಿ ಕಾರ್ಯಕ್ರಮದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.