Advertisement

ವ್ಯಾಪ್ತಿ ನೆಪ ಹೇಳದೆ ದೂರು ದಾಖಲಿಸಿಕೊಳ್ಳಿ

03:30 PM Feb 03, 2020 | Naveen |

ಚಿತ್ರದುರ್ಗ: ಸಂತ್ರಸ್ತರು ದೂರು ನೀಡಲು ಪೊಲೀಸ್‌ ಠಾಣೆಗೆ ಬಂದಾಗ ವ್ಯಾಪ್ತಿಯ ನೆಪ ಹೇಳದೆ ಮೊದಲು ದೂರು ದಾಖಲಿಸಿಕೊಳ್ಳಬೇಕು. ನಂತರ ಅದನ್ನು ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಲು ಈಗ ಜೀರೋ ಎಫ್‌ಐಆರ್‌ ಪದ್ಧತಿ ಜಾರಿಯಲ್ಲಿದೆ ಎಂದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಮಾಖ್ಯಾ ಚಿತ್ರದುರ್ಗ ಸಹಯೋಗದಲ್ಲಿ ಭಾನುವಾರ ಪೊಲೀಸ್‌ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಲಿಂಗತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀರೋ ಎಫ್‌ಐಆರ್‌ ಪದ್ಧತಿ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದು ಸುಪ್ರೀಂ ಕೋರ್ಟ್‌ ಆದೇಶ. ಉಲ್ಲಂಘನೆ ಮಾಡಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಗೆ ಎಸ್ಪಿಯಾಗಿ ಬಂದ ಮೊದಲ ದಿನವೇ ನನ್ನ ಆಸಕ್ತಿಯ ಕ್ಷೇತ್ರದ ಕಾರ್ಯಕ್ರಮ ಇದಾಗಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಅಡಿಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಈ ರೀತಿಯ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳಬೇಕೆಂದರು.

ಯಾರಿಗಾದರೂ ತೊಂದರೆಯಾದರೂ ಮೊದಲು ಬರುವುದು ಪೊಲೀಸ್‌ ಠಾಣೆಗೆ. ವಿಶೇಷವಾಗಿ ಮಹಿಳಾ ಪೊಲೀಸ್‌ ಠಾಣೆಯವರೆಗೆ ಬರುತ್ತಾರೆಂದರೆ ಅದರ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಯಾವತ್ತೂ ಪೊಲೀಸ್‌ ಠಾಣೆ ಕಡೆಯ ಆಯ್ಕೆ ಆಗಿರುತ್ತದೆ. ಆದರೆ ದೂರು ನೀಡಲು ಬಂದವರನ್ನೇ ಅನುಮಾನದಿಂದ ನೋಡಿ ಅವಮಾನಿಸುವ ಬದಲು ಅವರ ಜತೆ ಮಾತನಾಡಿ ಸಮಸ್ಯೆ ಆಲಿಸಿದರೆ ಅರ್ಧ ಸಮಸ್ಯೆ ಬಗೆಹರಿಯುತ್ತದೆ.

ಈ ವಿಚಾರದಲ್ಲಿ ಪೊಲೀಸರು ಬದಲಾಗಬೇಕು. ಸಮಾಜ ಕೂಡ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದವರನ್ನು ನಕಾರಾತ್ಮಕವಾಗಿ ನೋಡುವ ಮನೋಭಾವ ಬಿಡಬೇಕು ಎಂದು ತಿಳಿಸಿದರು.

Advertisement

ಮಹಿಳೆಯರು ಪೊಲೀಸ್‌ ಠಾಣೆಗೆ ಬಂದಾಗ ಮೊದಲು ಅವರನ್ನು ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳೇ ಅಟೆಂಡ್‌ ಮಾಡಬೇಕು ಎಂಬ ನಿಯಮವಿದೆ. ಕೆಲ ಸಂದರ್ಭಗಳಲ್ಲಿ ಅತ್ಯಾಚಾರಕ್ಕೆ ಒಳಗಾಗಿ ದೂರು ನೀಡಲು ಬಂದ ಸಂತ್ರಸ್ತ ಮಹಿಳೆಯರನ್ನು ನೋಡುವ ರೀತಿ ಸರಿಯಾಗಿಲ್ಲ. ಇದು ಬದಲಾಗಿ ನೊಂದ ಮಹಿಳೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ಪೊಲೀಸರೂ ಮಹಿಳಾ ಸಬಲೀಕರಣ, ರಕ್ಷಣೆ ಬಗ್ಗೆ ಮಾಹಿತಿ ಹೊಂದುವುದು ಬಹಳ ಮುಖ್ಯ. ಇಲ್ಲದಿದ್ದರೆ ಕಾನೂನು ಮೂಲಕವೇ ಮಾಡಬೇಕಾಗುತ್ತದೆ ಎಂಬುದನ್ನು ಮರೆಯಬಾರದೆಂದರು.

ಮಹಿಳಾ ಸಮಾಖ್ಯಾ ಚಿತ್ರದುರ್ಗದ ಜಿಲ್ಲಾ ಪ್ರಭಾರಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಮಾತನಾಡಿ, ಶಿಕ್ಷಣ ಅಂದರೆ ಅಕ್ಷರಗಳ ಕಲಿಕೆ ಮಾತ್ರವಲ್ಲ. ಮಾಹಿತಿ ತಿಳಿಯುವುದು ಕೂಡಾ ಆಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಖ್ಯಾ ಕೆಲಸ ಮಾಡುತ್ತಿದೆ ಎಂದರು. 1986ರ ಶಿಕ್ಷಣ ನೀತಿಯಡಿ ಸಮಾಖ್ಯಾ ಜನ್ಮ ತಾಳಿದ್ದು, ಆರಂಭದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾರ್ಯಾರಂಭ ಮಾಡಿತ್ತು. ಈಗ 11 ರಾಜ್ಯಗಳ 78 ಜಿಲ್ಲೆಗಳಲ್ಲಿ, ಗ್ರಾಮೀಣ ಮಹಿಳೆಯರ ಶಿಕ್ಷಣ ಸುಧಾರಣೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ಭಾರತಿ ಬಣಕಾರ್‌, ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಪ್ಪ, ಚಿತ್ರದುರ್ಗ ಅಧಿಕಾರಿ ವೆಂಕಟಲಕ್ಷ್ಮೀ , ಜಿಲ್ಲಾ ಸಂಪನ್ಮೂಲ ಅಧಿಕಾರಿ ಜಯರೋನಬಿ, ಎಎಸ್‌ಪಿ ಎಂ.ಬಿ. ನಂದಗಾವಿ, ಡಿವೈಎಸ್ಪಿ ಪಾಂಡುರಂಗ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next