ಚಿತ್ರದುರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ನಗರದಲ್ಲಿ ನಡೆಸಿದ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಗೊಂದಲದ ಗೂಡಾಗಿತ್ತು.
ಬೆಳಿಗ್ಗೆ 10:30 ಗಂಟೆಗೆ ಆರಂಭವಾಗಬೇಕಿದ್ದ ಕೌನ್ಸೆಲಿಂಗ್ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಇದರ ಜತೆಗೆ ಕಡ್ಡಾಯ ವರ್ಗಾವಣೆ ವಿರೋಧಿಸಿ ಕಳೆದ ಹಲವು ದಿನಗಳಿಂದ ಮುನಿಸಿನಲ್ಲಿದ್ದ ಶಿಕ್ಷಕರು ಇಲಾಖೆಯ ಕ್ರಮದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದರು.
ಮೊದಲ ಹಂತದಲ್ಲಿ ಎ ವಲಯದಿಂದ ಬಿ ಮತ್ತು ಎ ವಲಯದಿಂದ ಸಿ ವಲಯಕ್ಕೆ ಶೇ. 20ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ತಾಲೂಕುಗಳಿಗೆ ವರ್ಗಾವಣೆ ಪ್ರಾರಂಭವಾಯಿತು. ಈ ವೇಳೆ ಕೆಲ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲವನ್ನೂ ಸರಿಪಡಿಸಿ ಮತ್ತೆ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ಆರಂಭಿಸುವ ಹೊತ್ತಿಗೆ ದೂರದ ಮೊಳಕಾಲ್ಮೂರು ತಾಲೂಕಿಗೆ ವರ್ಗವಾಗಲು ಇಷ್ಟವಿಲ್ಲದ ಶಿಕ್ಷಕರು ಮೊದಲು ನಮ್ಮನ್ನು ತೆಗೆದುಕೊಳ್ಳಬೇಡಿ. ಸುತ್ತಮುತ್ತ ಇರುವ ಶಿಕ್ಷಕರಿಗೆ ಆದ್ಯತೆ ಕೊಡಿ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಕಡೆಯಿಂದ ಮೊಳಕಾಲ್ಮೂರು ತಲುಪಲು ನೂರು ಕಿಮೀಗಿಂತ ದೂರವಾಗುತ್ತದೆ ಎಂದು ಒತ್ತಾಯಿಸಿದರು.
ಆದರೆ ಇದ್ಯಾವುದನ್ನೂ ಪರಿಗಣಿಸದೆ ಇಲಾಖೆಯ ಆದೇಶದನ್ವಯ ರಾತ್ರಿ 7 ಗಂಟೆವರೆಗೆ ಡಿಡಿಪಿಐ ಕಚೇರಿಯಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಡೆಯಿತು. ಜಿಲ್ಲೆಯಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇರುವುದು ಮೊಳಕಾಲ್ಮೂರು ತಾಲೂಕಿನಲ್ಲಿ. ಆದರೆ ಅಲ್ಲಿಗೆ ಹೋಗಲು ಯಾರೂ ಒಪ್ಪದೇ ಇರುವುದು ಕಂಡು ಬಂತು. ಹಲವಾರು ಶಿಕ್ಷಕರು, ಗಲ್ಲಿಗೇರಿಸುವಾಗಲಾದರೂ ಕೊನೆಯ ಆಸೆ ಕೇಳುತ್ತಾರೆ. ಆದರೆ ಇಲಾಖೆ ನಮ್ಮ ಮಾತನ್ನೇ ಕೇಳದಂತೆ ಏಕಾಏಕಿ ವರ್ಗಾವಣೆ ಮಾಡಲು ಮುಂದಾಗಿದೆ. ಇದರಿಂದ ನಮ್ಮ ಬದುಕು ಅಸ್ತವ್ಯಸ್ತವಾಗಲಿದೆ. ಮಕ್ಕಳು, ಸಂಸಾರ ಎಲ್ಲವನ್ನೂ ಬಿಟ್ಟು ಹೋಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟು 87 ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುತ್ತಿದ್ದು, ಇದರಲ್ಲಿ 6 ಮುಖ್ಯ ಶಿಕ್ಷಕರು, 75 ಸಹ ಶಿಕ್ಷಕರು ಹಾಗೂ 6 ದೈಹಿಕ ಶಿಕ್ಷಕರು ಇದ್ದಾರೆ.