Advertisement

122 ಗ್ರಾಮಗಳಿಗೆ ಇನ್ನೂ ಟ್ಯಾಂಕರ್‌ ನೀರೇ ಗತಿ!

12:34 PM Aug 15, 2019 | Naveen |

ಚಿತ್ರದುರ್ಗ: ರಾಜ್ಯದ ಅರ್ಧ ಭಾಗ ನೆರೆಯಿಂದ ತತ್ತರಿಸಿ ಎಲ್ಲೆಲ್ಲೂ ನೀರು ತುಂಬಿಕೊಂಡಿತ್ತು. ಆದರೆ ಇದಕ್ಕೆ ಅಪವಾದ ಎಂಬಂತೆ ಚಿತ್ರದುರ್ಗ ಜಿಲ್ಲೆಯ 122 ಗ್ರಾಮಗಳಿಗೆ ಇನ್ನೂ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ!

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸ್ವತಃ ಜಿಲ್ಲಾಧಿಕಾರಿಗಳೇ ಈ ಮಾಹಿತಿ ನೀಡಿದ್ದಾರೆ. ಮಳೆ ಕೊರತೆ ಕಾರಣಕ್ಕೆ 122 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 86 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಹೊಸದುರ್ಗ ಪಟ್ಟಣದ 9 ವಾರ್ಡ್‌ಗಳಿಗೆ ಟ್ಯಾಂಕರ್‌ ನೀರು ಸರಬರಾಜಾಗುತ್ತಿದೆ. ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಿ ಟ್ರಿಪ್‌ ಶೀಟ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಕಾಲ ಕಾಲಕ್ಕೆ ಬಿಲ್ ಸಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ ಎಂದು ಗರಂ ಆದರು.

ಈ ವರ್ಷ ಕುಡಿಯುವ ನೀರಿಗಾಗಿ ಗ್ರಾಮೀಣ ಪ್ರದೇಶದಲ್ಲಿ 4.69 ಕೋಟಿ ರೂ. ಹಾಗೂ ನಗರ ಪ್ರದೇಶದಲ್ಲಿ 11.12 ಕೋಟಿ ರೂ. ವೆಚ್ಚವಾಗಿದೆ. ಟ್ಯಾಂಕರ್‌ ಬಾಡಿಗೆ ಮೇ ತಿಂಗಳಿನಿಂದ ಸಲ್ಲಿಕೆಯಾಗಿಲ್ಲ. ಈ ಬಗ್ಗೆ ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆ ಗ್ರಾಪಂಗಳಿಗೆ ತೆರಳಿ ವ್ಯವಸ್ಥಿತವಾಗಿ ಬಿಲ್ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

Advertisement

ಮತ್ತೆ ಮೇವಿನ ಕೊರತೆ ಸಾಧ್ಯತೆ: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಈ ವರ್ಷವೂ ಮೇವಿನ ಕೊರತೆಯಾಗುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಮೇವು ಬೆಳೆಯುವ ಅವಕಾಶ, ಲಭ್ಯತೆ, ಬೇಡಿಕೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಮಳೆ ನಂಬಿ ರೈತರು ಯಾವ ಬೆಳೆಯನ್ನೂ ಸರಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಇಲ್ಲಿ ಆಗುವ ಮಳೆಯಿಂದ ಲಾಭ ಪಡೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ರೈತರಿಗೆ ತರಬೇತಿ ನೀಡಬೇಕು. ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದಿರುವ ಬೆಳೆಗಳ ಬದಲಿಗೆ ಲಾಭದಾಯಕ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಕಾರ್ಮಿಕರ ನೋಂದಣಿಯಲ್ಲೂ ಹಿನ್ನಡೆ: ಜಿಲ್ಲೆಯಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಕೇವಲ 38,174 ಸ್ಮಾರ್ಟ್‌ ಕಾರ್ಡ್‌ ನೀಡಲಾಗಿದೆ. ಜಿಲ್ಲೆಯಲ್ಲಿ ಕಟ್ಟಡ ಗುತ್ತಿಗೆದಾರರ ಸಂಘಗಳನ್ನು ಸಂಪರ್ಕಿಸಿ ಕಟ್ಟಡ ಕಾರ್ಮಿಕರ ವಿವರ ಪಡೆಯಬೇಕು. ತಾಲೂಕು ಮಟ್ಟದಲ್ಲಿ ವಿಶೇಷ ಶಿಬಿರವನ್ನು ಆಯೋಜಿಸಿ, ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಯ ಆಗಬೇಕು. ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಲಭ್ಯವಿದ್ದು, ಫಲಾನುಭವಿಗಳನ್ನೇ ಗುರುತಿಸದಿದ್ದರೆ, ಸೌಲಭ್ಯ ಹೇಗೆ ತಲುಪಿಸುತ್ತೀರಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿಲ್ಲೆಯಲ್ಲಿ ನೋಂದಣಿ ಕಾರ್ಯ ತ್ವರಿತವಾಗಿ ಆಗಬೇಕು ಎಂದರು. ಜಿಪಂ ಸಿಇಒ ಸಿ. ಸತ್ಯಭಾಮಾ ಮಾತನಾಡಿ, ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸಲು ಇನ್ನೂ ಸುಮಾರು 25 ಸಾವಿರ ಶೌಚಾಲಯ ನಿರ್ಮಾಣ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next