ಚಿತ್ರದುರ್ಗ: ತಾಲೂಕಿನ ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಲು ತಾಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಸದಸ್ಯ ಸುರೇಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಹಿರೇಗುಂಟನೂರು ಗ್ರಾಪಂನಲ್ಲಿ ಅವ್ಯವಹಾರ ಆಗಿದೆ ಎಂದು ಹೇಳುತ್ತಿದ್ದರೂ ಯಾಕೆ ಗಮನಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷ ಲಿಂಗರಾಜು, ಈ ಬಗ್ಗೆ ಮಾಹಿತಿ ಇದೆ. ಅಲ್ಲಿಗೆ ಪಿಡಿಒಗಳೇ ಬರುತ್ತಿಲ್ಲ ಎನ್ನುವ ಆತಂಕವಿದೆ. ಒಂದು ವರ್ಷದಿಂದ ಅಲ್ಲಿ ಪಿಡಿಒ ಹುದ್ದೆ ಖಾಲಿಯಿದೆ. ಬಂದರೂ ಮೂರ್‍ನಾಲ್ಕು ತಿಂಗಳೂ ಇರುವುದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮಾಡಿಸಲಾಗುವುದು ಎಂದರು. ಇದಕ್ಕೆ ಸದಸ್ಯ ವೇಣುಗೋಪಾಲ್ ಕೂಡ ಧ್ವನಿಗೂಡಿಸಿ ತಾಲೂಕಿನ ಎಲ್ಲಾ ಗ್ರಾಪಂಗಳನ್ನೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಸದಸ್ಯ ವೇಣುಗೋಪಾಲ್ ಮಾತನಾಡಿ, ಕಾಸವರಹಟ್ಟಿಯಲ್ಲಿ ಬಸವನಹುಳುವಿನ ಕಾಟ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ 100 ರಿಂದ 200 ಹುಳುಗಳು ಸಿಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕಿ ಡಾ| ಭಾರತಮ್ಮ ಮಾತನಾಡಿ, ಬಸವನಹುಳು ಹಾಗೂ ಎರೆಹುಳು ರೈತ ಮಿತ್ರ ಎಂದೇ ಹೆಸರಾಗಿವೆ. ಇದರಿಂದ ತೊಂದರೆ ಇಲ್ಲ ಎಂದರು.
ಬಿಇಒ ಸಿದ್ದಪ್ಪ ಮಾತನಾಡಿ, ಈಗಾಗಲೇ 2020-2021ನೇ ಸಾಲಿನ ಪಠ್ಯಪುಸ್ತಕ, ಸಮವಸ್ತ್ರಗಳು ಬಂದಿದೆ. ಸರ್ಕಾರದ ಸೂಚನೆ ನಂತರ ಶಾಲೆಗಳಿಗೆ ಕಳುಹಿಸಲಾಗುವುದು. ಜೂ. 25 ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲು ಒಪ್ಪಿದೆ ಎಂದು ಮಾಹಿತಿ ನೀಡಿದರು.
ಸದಸ್ಯ ಸುರೇಶ್ ನಾಯ್ಕ ಮಾತನಾಡಿ, ಸದ್ಯಕ್ಕೆ ಶಾಲೆಗಳನ್ನು ತೆರೆಯುವುದು ಬೇಡ. ಕೊರೊನಾಗೆ ಔಷ ಧ ಬಂದ ನಂತರ ಶಾಲೆ ತೆರೆಯಿರಿ ಎಂದು ಒತ್ತಾಯಿಸಿದರು. ಭರಮಸಾಗರ ಮತ್ತು ಚಿಕ್ಕಗೊಂಡನಹಳ್ಳಿ ಪಿಡಿಓಗಳು ಯಾರ ಮಾತನ್ನು ಕೇಳುತ್ತಿಲ್ಲ. ಹೀಗಾಗಿ ಇಬ್ಬರನ್ನೂ ಬೇರೆಡೆಗೆ ವರ್ಗಾವಣೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು.