ಚಿತ್ರದುರ್ಗ: ರಾಜ್ಯದಲ್ಲೇ ಅತೀ ಹೆಚ್ಚು ಸಿರಿಧಾನ್ಯ ಬೆಳೆಯುವ ಚಿತ್ರದುರ್ಗ ಜಿಲ್ಲೆಯ ರೈತರು ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಟಿ. ಜಗದೀಶ್ ಹೇಳಿದರು.
ಎಪಿಎಂಸಿ ಬಳಿ ಇರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಚಿತ್ರದುರ್ಗ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಅಂಗನವಾಡಿ, ಶಾಲೆಗಳ ಬಿಸಿಯೂಟ, ವಿದ್ಯಾರ್ಥಿನಿಲಯ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳಿಗೆ ಉಪಯೋಗಿಸುವ ಮೂಲಕ ಮಾರುಕಟ್ಟೆಯನ್ನು ಸಮಸ್ಯೆ ನೀಗಿಸಬಹುದು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸುವಂತೆ ಕೃಷಿಕ ಸಮಾಜದ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸರ್ಕಾರದಿಂದ ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಪ್ರೋತ್ಸಾಹಧನ ದೊರೆಯುತ್ತಿದೆ. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ನೀಡಲಾಗುತ್ತಿದೆ. ಈ ರೀತಿಯ ಯೋಜನೆಗಳು ರೈತರಲ್ಲಿ ಚೈತನ್ಯ ಮೂಡಿಸಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಮುಂದಾಗಬಾರದು ಎಂದು ಮನವಿ ಮಾಡಿದರು.
ಕಳೆದ ಎರಡು ವರ್ಷಗಳಿಂದ ಕೃಷಿಕ ಸಮಾಜದ ಸಭೆ ಕರೆಯದಿರಲು ಕಾರಣವನ್ನು ತಿಳಿಸಿ ಎಂದು ಎಲ್ಲ ಪದಾಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳಲ್ಲಿ ತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕಿ ಜಿ.ಯು. ಭಾರತಮ್ಮ, ನನಗೆ ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲೂಕುಗಳ ಜವಾಬ್ದಾರಿ ಇತ್ತು. ಲೋಕಸಭಾ ಚುನಾವಣೆ ನೀತಿಸಂಹಿತೆ, ಇಲಾಖೆಯ ಸಿಬ್ಬಂದಿ ಕೊರತೆ, ಉದ್ಯೋಗ ಖಾತ್ರಿ ಸೇರಿದಂತೆ ನಾನಾ ಯೋಜನೆಗಳು, ವಾರದಲ್ಲಿ ಐದಾರು ಸಭೆಗಳಿಂದ ಕಾರ್ಯಭಾರ ಹೆಚ್ಚಾಗಿ ಸಭೆಯನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಸಕಾಲದಲ್ಲಿ ಸಭೆ ನಡೆಸಲಾಗುವುದು. ನಿರಂತರ ಜಾಗೃತಿಯ ಪರಿಣಾಮ ಹಾಗೂ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಚಿತ್ರದುರ್ಗ ತಾಲೂಕಿನಲ್ಲಿ 1700ಕ್ಕೂ ಹೆಚ್ಚು ರೈತರು ಸಿರಿಧಾನ್ಯ ಬೆಳೆಯಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಆರ್. ಶಶಿಧರ, ಖಜಾಂಚಿ ಪ್ರಶಾಂತ್ ಯಾದವ್, ನಿರ್ದೇಶಕರಾದ ಎನ್. ಪರಶುರಾಮ್, ಎಸ್.ಬಿ. ಗಣೇಶ್, ಸಿ.ಎಂ. ಷಣ್ಮುಖ, ಜೆ. ಅಶೋಕ, ಎ. ಚಂದ್ರು, ಜೆ. ಮಂಜುನಾಥ್, ಕೃಷಿ ಅಧಿಕಾರಿ ಮಲ್ಲನಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.