Advertisement

ಜಲಮೂಲ ಸ್ವಚ್ಛಗೊಳಿಸಿ ಅಂತರ್ಜಲ ವೃದ್ಧಿಸಿ

01:06 PM Jul 21, 2019 | Naveen |

ಚಿತ್ರದುರ್ಗ: ಜಿಲ್ಲಾಡಳಿತ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಸ್ವಚ್ಛ ಸರ್ವೇಕ್ಷಣ-2020, ನಮ್ಮ ಚಿತ್ತ ಸ್ವಚ್ಛತೆಯತ್ತ ಧ್ಯೇಯ ಘೋಷಣೆಯಡಿ ನಗರದ ಎಲ್ಐಸಿ ಕಚೇರಿಯ ಹತ್ತಿರದ ಕೆಂಚಮಲ್ಲಪ್ಪನ ಬಾವಿ ಬಳಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಚಾಲನೆ ನೀಡಿದರು.

Advertisement

ಬಳಿಕ ಈ ಕುರಿತು ಮಾಹಿತಿ ನೀಡಿದ ಅವರು, ಚಿತ್ರದುರ್ಗ ಜಿಲ್ಲೆಯು ಜಲಶಕ್ತಿ ಅಭಿಯಾನದಡಿ ಆಯ್ಕೆಯಾಗಿದ್ದು, ಜಲಸಂರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಮಳೆಗಾಲದಲ್ಲಿ ಜಲಮೂಲಗಳನ್ನು ಸ್ವಚ್ಛಗೊಳಿಸುವುದರಿಂದ ನೀರಿನ ಶುದ್ಧತೆ ಹಾಗೂ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸಾಧ್ಯ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಜಲಮೂಲಗಳಲ್ಲಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಜಲಮಾಲಿನ್ಯ ಉಂಟಾಗಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ ಕಾರಣ ಸಾರ್ವಜನಿಕರು ಜಲಮೂಲ ಸ್ವಚ್ಛಗೊಳಿಸಿ, ಜಲ ಪ್ರಾಮುಖ್ಯತೆ ಬಗ್ಗೆ ಅರಿವು ಹೊಂದಬೇಕಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ನಗರದ ಕೆಂಚಮಲ್ಲಪ್ಪನ ಬಾವಿಯಲ್ಲಿರುವ ಘನತ್ಯಾಜ್ಯ, ಗಿಡಗಳು ಮತ್ತು ಹೂಳು ತೆಗೆದಿದ್ದು, ಸುಮಾರು 11 ಲೋಡ್‌ನ‌ಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಯಿತು ಎಂದು ತಿಳಿಸಿದರು.

ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಬಾಬುರೆಡ್ಡಿ, ನಗರದಲ್ಲಿ ಸ್ವಚ್ಛ ಆಂದೋಲನ ಕಾರ್ಯಕ್ರಮವು ಜುಲೈ ಮೊದಲ ವಾರದಿಂದ ಆರಂಭಗೊಂಡಿದ್ದು, ಜುಲೈ ಮೊದಲನೇ ಶನಿವಾರ ಜೆ.ಸಿ ನಗರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇನ್ನು ಮುಂದೆ ಪ್ರತಿ ತಿಂಗಳ ಮೊದಲನೇ ಶನಿವಾರ ಹಾಗೂ 3ನೇ ಶನಿವಾರ ನಗರದ ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ರೂಪಿಸಲಾಗುತ್ತದೆ. ಇಂದು ಮೂರು ತಂಡಗಳಾಗಿ ವಿಭಜಿಸಿ, ಮೊದಲನೇ ತಂಡವು ನಗರದ ಕೆಂಚಮಲ್ಲಪ್ಪನ ಬಾವಿ ಸ್ವಚ್ಛತೆ ಮಾಡಿದರೆ, ಎರಡನೇ ತಂಡ ಗಾಂಧಿವೃತ್ತದಿಂದ ಅಂಬೇಡ್ಕರ್‌ ವೃತ್ತದವರೆಗೆ ರಸ್ತೆಯ ಪಕ್ಕದಲ್ಲಿರುವ ಧೂಳು, ತ್ಯಾಜ್ಯ ನಿವಾರಣೆ ಮಾಡುತ್ತಿದೆ. ಹಾಗೂ ಮೂರನೇ ತಂಡವು ಜಿಲ್ಲಾಸ್ಪತ್ರೆಯ ಮುಂದಿರುವ ಸ್ವಾಮಿ ವಿವೇಕಾನಂದ ಉದ್ಯಾನವನದ ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌, ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ, ನಗರಸಭೆ ವ್ಯವಸ್ಥಾಪಕ ಜಯಣ್ಣ, ಪರಿಸರ ಅಭಿಯಂತರ ಜಾಫರ್‌, ಸರಳ ಹಾಗೂ ನಗರಸಭೆ ಸಿಬ್ಬಂದಿ, ಎಸ್‌.ಜೆ.ಎಂ, ಎಸ್‌.ಆರ್‌.ಎಸ್‌ ಕಾಲೇಜಿನ ವಿದ್ಯಾರ್ಥಿಗಳು, ಸಿ.ಕೆ.ಪುರ, ಕೆಳಗೋಟೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಲಯನ್ಸ್‌ ಕ್ಲಬ್‌ ಸರ್ಕಾರೇತರ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next