ಚಿತ್ರದುರ್ಗ: ಬೆಳೆ ವಿಮೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮುಚ್ಚಳಿಕೆ ಬರೆದುಕೊಟ್ಟು ಪ್ರತಿಭಟನೆ ನಡೆಸಿದರು.
ನ್ಯಾಯಸಮ್ಮತ ಬೇಡಿಕೆ ಈಡೇರಿಸುವಂತೆ ಹತ್ತಾರು ಸಲ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಬೆಂಗಳೂರಿಗೆ ಹೋಗಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಲ್ಲದೆ ಪ್ರತ್ಯೇಕವಾಗಿ ಕೃಷಿ ಆಯುಕ್ತರು ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೊನೆಯ ಅಸ್ತ್ರವಾಗಿ ಎಲ್ಲ ರೈತರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದೇವೆಂದು ಪ್ರತಿಭಟನಾಕಾರರು ಘೋಷಿಸಿದರು.
ಚಿತ್ರದುರ್ಗ ಜಿಲ್ಲೆ ನಿರಂತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಇನ್‌ಫುಟ್ ಸಬ್ಸಿಡಿ, ಸಾಲ ಮನ್ನಾ ಯೋಜನೆಯನ್ನು ರೈತರಿಗೆ ತಲುಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಅವೈಜ್ಞಾನಿಕ ಬೆಳೆ ವಿಮೆ ಪದ್ಧತಿಯಿಂದಾಗಿ ವಿಮಾ ಕಂಪನಿಗಳಿಗೆ ಅನುಕೂಲವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಜು. 22 ಸೋಮವಾರದೊಳಗೆ ವಿಮಾ ಪರಿಹಾರ, ಇನ್‌ಫುಟ್ ಸಬ್ಸಿಡಿ ಹಣವನ್ನು ರೈತರ ಖಾತೆಗಳಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ರೈತರ ಅಸಹಾಯಕತೆ ಬಗ್ಗೆ ಉದಾಸೀನ ಮಾಡಬೇಡಿ ಎಂದು ಎಚ್ಚರಿಸಿದರು.
ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪಾವತಿಸುವಂತೆ ಆಗ್ರಹಿಸಿ ನೂರಾರು ರೈತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದರೂ ವಿಮಾ ಕಂಪನಿಗಳು ಇನ್ನು ಬೆಳೆ ವಿಮೆಯನ್ನು ರೈತರ ಖಾತೆಗೆ ಜಮಾ ಮಾಡಿಲ್ಲ. ಈ ವರ್ಷ ಮುಂಗಾರು ಮಳೆಯೂ ಇಲ್ಲ. ಇಲ್ಲಿಯ ತನಕ ಒಂದೇ ಒಂದು ಹದ ಮಳೆಯೂ ಬಂದಿಲ್ಲ. ರೈತರ ಕೊಳವೆಬಾವಿಗಳು ಬತ್ತಿಹೋಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದರೂ ವಿಮೆ ಕಂಪನಿಗಳು ರೈತರ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮಾ ಮಾಡಲು ಸತಾಯಿಸುತ್ತಿವೆ. ಇತ್ತ ಬೆಳೆ ನಷ್ಟದ ಪರಿಹಾರವೂ ಇಲ್ಲ. ಅತ್ತ ಸಾಲ ಮನ್ನ ಯೋಜನೆಯಡಿ ಬ್ಯಾಂಕ್‌ಗಳಿಗೆ ಬಂದಿರುವ ಹಣ ವಾಪಸ್ ಹೋಗುತ್ತಿದೆ ಎಂದು ದೂರಿದರು.
ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಹಂಪಣ್ಣ, ಜಿ.ಎಚ್. ತಿಪ್ಪೇಸ್ವಾಮಿ, ಚಂದ್ರಣ್ಣ, ಏಕಾಂತ ರೆಡ್ಡಿ, ತಿಪ್ಪಣ್ಣ, ಆರ್.ಎ. ದಯಾನಂದಮೂರ್ತಿ, ಆರ್.ಎಸ್. ಅಮರೇಶ್ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.