Advertisement

ಚದುರಂಗದಿಂದ ಬುದ್ಧಿ ಶಕ್ತಿ ಚುರುಕು: ಮುರುಘಾ ಶ್ರೀ

07:13 PM Sep 23, 2019 | Naveen |

ಚಿತ್ರದುರ್ಗ: ಚಿನ್ನ, ಬೆಳ್ಳಿ, ಹಣ, ಆಸ್ತಿ ಕಳೆದುಹೋಗಬಹುದು. ಆದರೆ ಬುದ್ಧಿಮತ್ತೆ ಕಳೆದು ಹೋಗುವುದಿಲ್ಲ. ಇದು ಬದುಕಿನ ಆಸ್ತಿ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ದಸರಾ ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಮಠದ ಬಸವೇಶ್ವರ ಸಭಾಂಗಣದಲ್ಲಿ ಅಶ್ವ ಚೆಸ್‌ ಅಕಾಡೆಮಿ, ಮುರುಘಾಮಠ ಹಾಗೂ ಜಿಲ್ಲಾ ಆರ್‌.ಡಿ.ಪಿ.ಆರ್‌ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

ಮಾನವನ ಮೆದುಳಿಗೆ ಬುದ್ಧಿ ಪ್ರವೇಶವಾದರೆ ಯಾವತ್ತೂ ಕಳೆದು ಹೋಗುವುದಿಲ್ಲ, ಬುದ್ಧಿಶಕ್ತಿ ಸಕ್ರಿಯವಾಗಿರುವವರೆಗೆ ಸಾಧನೆ ಸಾಗುತ್ತಾ ಹೋಗುತ್ತದೆ ಎಂದರು.

ಕೆಲವರು ಚದುರಂಗ ಆಡುತ್ತಾರೆ, ಮತ್ತೆ ಕೆಲವರ ಜೀವನವೇ ಚದುರಂಗದ ಆಟದಂತೆ ಆಗಿರುತ್ತದೆ. ಚದುರಂಗದಲ್ಲಿ ಯಶಸ್ಸು ಸಿಗಬೇಕಾದರೆ ಬೌದ್ಧಿಕತೆ ಬೇಕು. ತಂತ್ರಗಾರಿಕೆ, ಬುದ್ಧಿ ಚುರುಕು ಮತ್ತು ತೀಕ್ಷಣ್ಣ ಆಗಿರಬೇಕು. ಹಾಗಾಗಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಚದುರಂಗದ ಆಟಕ್ಕೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.

ಜಿಪಂ ಸದಸ್ಯ ನರಸಿಂಹರಾಜು ಮಾತನಾಡಿ, ಮನಸ್ಸಿನ ಏಕಾಗ್ರತೆಗೆ ಚೆಸ್‌ ಆಟ ತುಂಬಾ ಸಹಕಾರಿ. ಪೋಷಕರು ಇಂತಹ ಬುದ್ಧಿವಂತಿಕೆಯ ಆಟದ ಕಡೆಗೆ ಮಕ್ಕಳನ್ನು ಪ್ರೇರೇಪಿಸಬೇಕು. ಮಕ್ಕಳ ಜೀವನದಲ್ಲಿ ಓದು ಒಂದು ಭಾಗವಾದರೆ ಕ್ರೀಡೆ ಒಂದು ಭಾಗ ಆಗಬೇಕು. ಹಾಗಾಗಿ ಮಕ್ಕಳಿಗೆ ಕೇವಲ ಪಠ್ಯಕ್ಕೆ ಸೀಮಿತ ಮಾಡದೇ ಕ್ರೀಡೆಗೂ ಹೆಚ್ಚಿನ ಆಸಕ್ತಿ ಮೂಡಿಸಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಚ್‌.ಎನ್‌. ತಿಪ್ಪೇಸ್ವಾಮಿ, ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು, ಇಒ ಎಚ್‌. ಕೃಷ್ಣಾ ನಾಯ್ಕ, ಸಹಾಯಕ ನಿರ್ದೇಶಕ ಎಚ್‌. ಹನುಮಂತಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ಚಿಕ್ಕಂದವಾಡಿ, ಎಸ್‌.ಎಂ. ಸಂತೋಷ್‌ಕುಮಾರ್‌, ಆರ್‌ಡಿಪಿಆರ್‌ ಇಲಾಖಾ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಟಿ. ವೀರೇಶ್‌, ಅಶ್ವ ಚೆಸ್‌ ಅಕಾಡೆಮಿ ಅಧ್ಯಕ್ಷ ನವೀನ್‌ ಮತ್ತಿತರರು ಭಾಗವಹಿಸಿದ್ದರು.

ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ಬಾಗಲಕೋಟೆ, ತುಮಕೂರು, ಕೊಪ್ಪಳ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ 19 ಅಂಧರು ಸೇರಿ 180ಕ್ಕೂ ಹೆಚ್ಚು ಚೆಸ್‌ ಆಟಗಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next