ಚಿತ್ರದುರ್ಗ: ರಾಜ್ಯ ಸರ್ಕಾರ ದುರ್ಬಲವಾಗಿದೆ. ವಿರೋಧ ಪಕ್ಷಕ್ಕೆ ಓರ್ವ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯೂ ಇಲ್ಲ. ಇದರ ಪರಿಣಾಮವನ್ನು ನೆರೆ ಸಂತ್ರಸ್ತರು ಅನುಭವಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಬಂದು ಲಕ್ಷಾಂತರ ಜನ ನಿರಾಶ್ರಿತರಾಗಿದ್ದು, ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಪರಿಹಾರ ಘೋಷಿಸದಿರುವುದು ರಾಜ್ಯದಲ್ಲಿ ಗಟ್ಟಿಯಾದ ಸರ್ಕಾರ ಇಲ್ಲ ಎನ್ನುವುದನ್ನು ತೋರಿಸುತ್ತಿದೆ ಎಂದರು.
ನೆರೆ ಬಂದಿದ್ದರಿಂದ ಕೃಷಿ ಭೂಮಿ ಹಾಳಾಗಿದ್ದು, ದೊಡ್ಡ ದೊಡ್ಡ ಕಂದಕ ನಿರ್ಮಾಣವಾಗಿವೆ. ನೂರಾರು ಲೋಡ್ ಮಣ್ಣು ರಾಶಿ ಬಿದ್ದಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಎಲ್ಲವನ್ನೂ ಸರಿ ಮಾಡಿಕೊಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒತ್ತಾಯಿಸಿದ್ದೇನೆ ಎಂದರು.
ನೀರು ನಿರ್ವಹಣಾ ಮಂಡಳಿ ರಚಿಸಿ: ಬರಗಾಲದಲ್ಲಿ ಪ್ರತಿಭಟಿಸಿದರೂ ಮಹಾರಾಷ್ಟ್ರ ಸರ್ಕಾರ ನೀರು ಬಿಡಲಿಲ್ಲ. ದುಡ್ಡು ಕೊಟ್ಟು ನೀರು ಪಡೆಯುವ ದುಃಸ್ಥಿತಿ ನಮ್ಮನ್ನಾಳುವವರಿಂದ ಬಂದಿದೆ. ಇದರ ಬದಲು ಕಾವೇರಿ ನದಿಯಂತೆ ಕೃಷ್ಣಾ ನದಿಗೂ ನೀರು ನಿರ್ವಹಣಾ ಮಂಡಳಿ ರಚಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.
ನಮಗೆ ಇಷ್ಟವಿಲ್ಲದಿದ್ದರೂ ನಮ್ಮನ್ನೆಲ್ಲಾ ಬಂಧಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿದ್ದಾರೆ. ಈಗ ನಾವು ಒತ್ತಾಯಿಸುತ್ತಿದ್ದೇವೆ. ಕೃಷ್ಣಾ ನದಿಗೂ ಮಂಡಳಿ ರಚಿಸಿ, ಜತೆಗೆ ಆಲಮಟ್ಟಿ ಜಲಾಶಯದ ತೂಬಿನ ಮಟ್ಟ ಎತ್ತರಿಸಬೇಕು. ಸರಿಯಾದ ನೀರು ನಿರ್ವಹಣಾ ಕ್ರಮ ಕೈಗೊಂಡಿದ್ದರೆ 1 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹರಿಯುವುದು ತಪ್ಪುತ್ತಿತ್ತು ಎಂದರಲ್ಲದೇ ರಾಜ್ಯದ ಸಮಗ್ರ ನೀರಾವರಿ ಪದ್ಧತಿಗಾಗಿ ಮುಂದಿನ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂ. ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಅಡ್ಡ ಬೀಳಬೇಕೆ?: ಪರಿಹಾರಕ್ಕಾಗಿ ಪ್ರಧಾನಿಗೆ ರಾಜ್ಯದ ಜನತೆ ಅಡ್ಡ ಬೀಳಬೇಕೇ ಎಂದು ಪ್ರಶ್ನಿಸಿದ ಕೋಡಿಹಳ್ಳಿ,ರಾಜ್ಯದ ಸಂಸದರು ಆಂಧ್ರಪ್ರದೇಶ, ತಮಿಳನಾಡು ಸಂಸದರಂತೆ ಪ್ರಧಾನಿ ಎದುರು ಪೆರೇಡ್ ಮಾಡಿ ಪರಿಹಾರ ಕೇಳಬೇಕು. ಆದರೆ ನಮ್ಮ ಸಂಸದರು ಈ ವಿಚಾರದಲ್ಲಿ ವಿಫಲರಾಗಿದ್ದಾರೆ ಎಂದು ಆಕ್ಷೇಪಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ಧವೀರಪ್ಪ, ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಭಕ್ತರಹಳ್ಳಿ
ಬೈರೇಗೌಡ, ಲಕ್ಷ್ಮಣಸ್ವಾಮಿ, ರಾಜು, ನಾಗಣ್ಣ, ಬಾಬಣ್ಣ, ಜಿಲ್ಲಾಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.