ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಿನ ಹತ್ತಿರವಾಗುತ್ತಿದ್ದು, ಜಿಲ್ಲೆ ಉನ್ನತ ಸ್ಥಾನಮಾನ ಪಡೆಯಬೇಕು. ಆದರೆ ಯಾವುದೇ ಕಾರಣಕ್ಕೂ ನಕಲು ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 27 ರಿಂದ ಏಪ್ರಿಲ್ 9ರವರೆಗೆ ನಡೆಯಲಿದ್ದು, ಈ ವೇಳೆ ಯಾವುದೇ ಲೋಪದೋಷವಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳು ತಮ್ಮ ಗುಣಮಟ್ಟದ ಅಭ್ಯಾಸದಿಂದ ಉನ್ನತ ಅಂಕ ಗಳಿಸಲು ಪ್ರೋತ್ಸಾಹ ನೀಡಬೇಕು ಎಂದರು.
ಈ ಬಾರಿ ಜಿಲ್ಲೆಯ 87 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 22,567 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳು ಮತ್ತು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆ ತಲುಪಬೇಕು. ಶುದ್ಧ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗುವುದು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ವಿದ್ಯಾರ್ಥಿಗಳು ಆಗಮಿಸಿದ ಕೂಡಲೇ ಅವರಿಗೆ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶ ನೀಡಬೇಕು. ವಿದ್ಯಾರ್ಥಿಗಳು ಗುಂಪು ಸೇರದಂತೆ ನಿಗಾವಹಿಸಬೇಕು. ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದರೂ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಆಟವಾಡದಂತೆ ಹಾಗೂ ಮನೆ ಬಿಟ್ಟು ಹೊರಗೆ ಬಾರದಂತೆ ಶಿಕ್ಷಕರು ಹಾಗೂ ಪೋಷಕರು ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರಿ ಶಾಲೆ-32, ಅನುದಾನಿತ ಶಾಲೆ-47 ಹಾಗೂ ಅನುದಾನ ರಹಿತ-8 ಸೇರಿದಂತೆ ಒಟ್ಟು 87 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 18, ಚಿತ್ರದುರ್ಗ-25, ಹಿರಿಯೂರು-14, ಹೊಳಲ್ಕೆರೆ-11, ಹೊಸದುರ್ಗ-12 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 07 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಪರೀಕ್ಷಾ
ಕೇಂದ್ರಗಳಿಗೆ ತಲುಪಿಸುವ ಸಲುವಾಗಿ ಈಗಾಗಲೆ 36 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ತಡೆಯುವ ಹಾಗೂ ಸುಗಮವಾಗಿ ಪರೀಕ್ಷಾ ಪ್ರಕ್ರಿಯೆ ನಡೆಸಲು 87 ಜಾಗೃತದಳದ ಅ ಕಾರಿಗಳು ಹಾಗೂ 66 ವೀಕ್ಷಕರನ್ನು ಈಗಾಗಲೆ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಖಜಾನೆ ಇಲಾಖೆ ಉಪನಿರ್ದೇಶಕರಾದ ಎಸ್. ಪ್ರಭಾವತಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.