Advertisement

ಇಂಗ್ಲಿಷ್‌ ಕಲಿಕೆಗೆ ಒತ್ತು ಕೊಡಿ

06:52 PM Sep 08, 2019 | Naveen |

ಚಿತ್ರದುರ್ಗ: ಮಗುವಿನ ಶಿಕ್ಷಣದ ಪ್ರಾರಂಭಿಕ ಹಂತದಲ್ಲೇ ಶಿಕ್ಷಕರು ತಪ್ಪಿಲ್ಲದೆ ಭಾಷೆ ಕಲಿಸಿದರೆ ನಂತರದ ದಿನಗಳಲ್ಲಿ ಮಕ್ಕಳಿಗೆ ಭಾಷೆಯ ಮೇಲೆ ಹಿಡಿತ ಬರುತ್ತದೆ ಎಂದು ಡಯಟ್ ಉಪ ಪ್ರಾಚಾರ್ಯ ಎಂ.ಎನ್‌. ರಮೇಶ್‌ ಹೇಳಿದರು.

Advertisement

ನಗರದ ಕೆ.ಕೆ. ನ್ಯಾಷನಲ್ ಶಾಲೆಯಲ್ಲಿ ಶನಿವಾರ ಕೆ. ಕೆಂಚಪ್ಪ ಎಜ್ಯುಕೇಷನ್‌ ಟ್ರಸ್ಟ್‌ನಿಂದ ಆಯೋಜಿಸಿದ್ದ ಸ್ಪೆಲ್ಲಿಂಗ್‌ ಬಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪಿಲ್ಲದೆ ಭಾಷೆ ಕಲಿಸಲು ಶಿಕ್ಷಕರು ಅಗತ್ಯವಿರುವ ಎಲ್ಲಾ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇದರಿಂದ ಮಕ್ಕಳ ಕಲಿಕಾ ಮಟ್ಟ ಸುಧಾರಣೆಯಾಗುತ್ತದೆ. ಯಾವುದೇ ಭಾಷೆಯ ಮೇಲೆ ಹಿಡಿತ ಸಾಧಿಸಲು ಇದು ನೆರವಾಗಲಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆ ಜತೆಗೆ ಇಂಗ್ಲಿಷ್‌ ಕಲಿಕೆಗೂ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು. ಕಲಿಕಾ ಹಂತದಿಂದಲೇ ಇಂಗ್ಲಿಷ್‌ ಕಡೆ ಗಮನಹರಿಸಿದರೆ ಮಾತೃಭಾಷೆಯ ಜತೆಗೆ ಮತ್ತೂಂದು ಭಾಷೆಯನ್ನೂ ಸುಲಭವಾಗಿ ಕಲಿಯಬಹುದು. ಇಂದು ಇಂಗ್ಲಿಷ್‌ ಸಂವಹನ, ಜಾಗತಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಭಾಷೆಯಾಗಿ ಪರಿವರ್ತನೆಯಾಗಿದೆ. ಇದನ್ನು ಮನಗಂಡು ಪಾಲಕರು ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಮುಂದಾಗಿದ್ದಾರೆ. ಆದರೆ ಕೆಲ ಸಂದರ್ಭದಲ್ಲಿ ಈ ಪ್ರಯತ್ನ ವಿಫಲವಾಗಿ ಬಿಡುತ್ತದೆ. ಒತ್ತಡದಿಂದ ಮಕ್ಕಳಿಗೆ ಬೇರೊಂದು ಭಾಷೆ ಕಲಿಸುವ ಬದಲು ಆ ಭಾಷೆಯ ಮೇಲೆ ಪ್ರೀತಿ ಬರುವಂತೆ ನೋಡಿಕೊಳ್ಳಬೇಕು. ನಂತರ ಎಲ್ಲವೂ ಸುಲಿತವಾಗಲಿದೆ ಎಂದು ಸಲಹೆ ನೀಡಿದರು.

ಕೆ.ಕೆಂಚಪ್ಪ ಎಜ್ಯುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎಚ್.ಆರ್‌. ಮಂಜುನಾಥ್‌ ಮಾತನಾಡಿ, ಶಿಕ್ಷಕರು ಪಾಠ ಮಾಡುವಾಗ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದು ಸರಿಯಲ್ಲ. ನಮ್ಮ ಸಮಸ್ಯೆಗಳನ್ನು ಯಾವ ಕಾರಣಕ್ಕೂ ಮಕ್ಕಳ ಮೇಲೆ ಹೇರಬಾರದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಿ ಸಾಧನೆ ಹಾದಿಯಲ್ಲಿ ನಡೆಯುವಂತೆ ಸರಿಯಾದ ದಾರಿ ತೋರಿಸುವುದು ಶಿಕ್ಷಕರ ಕೆಲಸ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯ ಬಗೆಗೆ ಇರುವ ಭಯವನ್ನು ಮೊದಲು ಬಿಡಬೇಕು. ಅದೊಂದು ಸಾಮಾನ್ಯ

Advertisement

ಭಾಷೆ. ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ದಿನನಿತ್ಯದ ಚಟುವಟಿಕೆಗಳಲ್ಲಿ ಇಂಗ್ಲಿಷ್‌ ರೂಡಿಸಿಕೊಂಡರೆ ಸರಳವಾಗುತ್ತದೆ ಎಂದರು.

ಸ್ಪೆಲ್ಲಿಂಗ್‌ ಸ್ಪರ್ಧೆಯಲ್ಲಿ ನಗರದ ವಿದ್ಯಾವಿಕಾಸ, ಚಿನ್ಮೂಲಾದ್ರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗ, ಕಬೀರಾನಂದ ಶಾಲೆ, ಡಾನ್‌ಬಾಸ್ಕೋ ವಿದ್ಯಾಸಂಸ್ಥೆ, ಜ್ಞಾನಭಾರತಿ ವಿದ್ಯಾಸಂಸ್ಥೆ, ತಮಟಕಲ್ಲು ಆಂಜನೇಯ ಸ್ವಾಮಿ ಪ್ರೌಢಶಾಲೆ, ವೆಸ್ಟ್ರರ್ನ್ ಹಿಲ್ಸ್ ಪ್ರೌಢಶಾಲೆಯಿಂದ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಚ್.ಡಿ. ಕೋಟೆಯ ಇಂಗ್ಲಿಷ್‌ ಉಪನ್ಯಾಸಕ ಎ. ಸೈಯ್ಯದ್‌ ಆಸಿಫ್‌, ಶಿಕ್ಷಕ ಸಿ.ಎಲ್. ಏಕನಾಥ್‌, ಆಡಳಿತಾಧಿಕಾರಿ ಕಾರ್ತಿಕ್‌, ಎ.ಎಂ.ಆರ್‌. ಸ್ವಾಮಿ, ಮುಖ್ಯ ಶಿಕ್ಷ‌ಕಿ ರಾಮೇಶ್ವರಿ ಅಮ್ಮಾಳ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next