ಚಿತ್ರದುರ್ಗ: ಕರುನಾಡನ್ನೇ ಬೆಚ್ಚಿ ಬೀಳಿಸಿದ್ದ ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂಬುದು ಪತ್ತೆಯಾಗಿದೆ.
ಐದೂ ಜನರ ಅಸ್ಥಿಪಂಜರದ ಮೂಳೆಗಳ ಪರೀಕ್ಷೆ ವೇಳೆ ನಿದ್ರೆ ಮಾತ್ರೆ ಅಂಶಗಳು ಪತ್ತೆಯಾಗಿದೆ ಎಂದು ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಮೂಲದ ನಿವೃತ್ತ ಎಂಜಿನಿಯರ್ ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ನರೇಂದ್ರ ರೆಡ್ಡಿ ಹಾಗೂ ಕೃಷ್ಣಾರೆಡ್ಡಿ ಅವರು ಮನೆಯಲ್ಲಿ ಮೃತಪಟ್ಟಿದ್ದು, ಅವರ ಅಸ್ಥಿಪಂಜರಗಳು 2023, ಡಿ.28ರಂದು ಪತ್ತೆಯಾಗಿದ್ದವು. ಈ ಸಂಬಂಧ ಜಿಲ್ಲಾಸ್ಪತ್ರೆ ವೈದ್ಯ ಡಾ| ವೇಣು ಹಾಗೂ ಬಸವೇಶ್ವರ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞ ಡಾ|ಶ್ರೀಕೃಷ್ಣ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ಕೆಲವರ ದೇಹದಲ್ಲಿ ಪತ್ತೆಯಾಗಿದ್ದ ಚರ್ಮದಲ್ಲೂ ನಿದ್ರೆ ಮಾತ್ರೆಯ ಅಂಶವನ್ನು ಮರಣೋತ್ತರ ಪರೀಕ್ಷೇ ವೇಳೆಯಲ್ಲೇ ವೈದ್ಯರು ಪತ್ತೆ ಮಾಡಿದ್ದರು.
ವರದಿಯಲ್ಲಿ ನಿದ್ರೆಯ ಮಾತ್ರೆಯ ಅಂಶಗಳನ್ನು ಉಲ್ಲೇಖೀಸಲಾಗಿದ್ದರೂ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕಾರಣ ಮೃತಪಟ್ಟು ಐದು ವರ್ಷ ಕಳೆದಿರುವುದರಿಂದ ಸರಿಯಾದ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ಮೇಲ್ನೋಟಕ್ಕೆ ನಿದ್ರೆ ಮಾತ್ರೆ ಸೇವನೆ ವಿಚಾರ ಹೊರ ಬಂದಿರುವುದರಿಂದ ಈ ಸಾವಿನ ಬಗ್ಗೆ ಇದ್ದ ಹಲವು ಅನುಮಾನಗಳಿಗೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.