Advertisement

ಶಿವಾಜಿ ಮಹಾರಾಜರ ಆದರ್ಶ ಪಾಲಿಸಿ

11:51 AM Jul 22, 2019 | Naveen |

ಚಿತ್ರದುರ್ಗ: ಶಿವಾಜಿ ಮಹಾರಾಜರು ಒಂದು ಸಮುದಾಯದ ಪ್ರಗತಿಗೆ ಕಾರಣರಾಗದೇ ಸರ್ವ ಸಮುದಾಯಗಳ ಏಳ್ಗೆ ಬಯಸಿದ್ದರು. ಅಲ್ಲದೆ ಭವ್ಯ ಭಾರತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ಬೆಂಗಳೂರು ಗವಿಪುರಂ ಭವಾನಿ ಪೀಠ, ಗೋಸಾಯಿ ಮಹಾಸಂಸ್ಥಾನ ಪೀಠದ ವೇದಾಂತಚಾರ್ಯ ಶ್ರೀ ಮಂಜುನಾಥಸ್ವಾಮಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ ಹಾಗೂ ಕೆಕೆಎಂಪಿ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ, ವಿದ್ಯಾರ್ಥಿ ವೇತನ ಹಾಗೂ ಸಹಾಯ ಧನ ವಿತರಣಾ ಸಮಾರಂಭ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಧರ್ಮ ರಹಿತ ಮತ್ತು ಧರ್ಮ ವಿರೋಧಿಯಾಗಿ ನಡೆದುಕೊಳ್ಳುವವರನ್ನು ಧರ್ಮದ ದಾರಿಗೆ ಕರೆತರುವ ಶಕ್ತಿ ಅವರಲ್ಲಿತ್ತು. ಶಿವಾಜಿಯವರ ಬದುಕು, ಜೀವನ ಚರಿತ್ರೆ, ಅತ್ಯಮೂಲ್ಯವಾಗಿದೆ. ಅವರು ತಾಯಿ, ಗುರು ಹಾಗೂ ಧೈವಿ ಭಕ್ತಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದರು ಎಂದು ಹೇಳಿದರು.

ಇತಿಹಾಸದ ಪುಟಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಕೆಲವೇ ಕೆಲವರಿಗೆ ದೇವರ ಪ್ರತ್ಯಕ್ಷರಾಗಿದ್ದು, ಅದರಲ್ಲಿ ಶಿವಾಜಿ ಮಹಾರಾಜರಿಗೆ ತುಳಜಾ ಭವಾನಿ ಪ್ರತ್ಯಕ್ಷಳಾಗಿ ಧರ್ಮ ಹಾಗೂ ನೀತಿ ವಿರುದ್ಧ ನಡೆದುಕೊಳ್ಳುವವರನ್ನು ಸರಿದಾರಿಗೆ ತರಲು ಖಡ್ಗವನ್ನು ಪಡೆದುಕೊಂಡ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.

ಸಮಾಜದ ಶ್ರೇಯೋಭಿವೃದ್ಧಿಗೆ ಸಂಘಟನೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಸಂಘಟಕರು ಶಿವಾಜಿ ಮಹಾರಾಜರ 392ನೇ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇಂದಿನ ಜಗತ್ತಿನಲ್ಲಿ ಪರೋಪಕಾರಿ ಸಂಘಟನೆಗಳು ಕಡಿಮೆ ಆಗಿವೆ. ಶಿಕ್ಷಣ, ಸಂಸ್ಥಾನ ಹಾಗೂ ಸಂಘಟನೆಗೆ ಹೆಚ್ಚು ಒತ್ತು ನೀಡಿದರೆ ಉನ್ನತ ಪ್ರಗತಿ ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವಾಜಿ ದೇಶ ಕಂಡ ಪರಮ ದೇಶ ಭಕ್ತ. ಹಿಂದೂ ಸಮಾಜಕ್ಕೆ ಅವರ ಕೊಡುಗೆ ಅಪಾರ. ಗುರು ಇಲ್ಲದ ಮನೆಗೆ ಗುರಿ ಇರುವುದಿಲ್ಲ. ಶಿವಾಜಿ ಮಹಾರಾಜರ ಹೋರಾಟದಿಂದ ನಮ್ಮ ದೇವಾಲಯಗಳು ಮತ್ತು ಸಂಸ್ಕೃತಿ ಉಳಿಯುವಂತೆ ಮಾಡಿತ್ತು. ಮೊಘಲರ ವಿರುದ್ಧ ಹೋರಾಟದಿಂದ ಮಹಾರಾಷ್ಟ್ರದಲ್ಲಿ ದೇವಾಲಯಗಳು ಉಳಿದಿವೆ. ಹಿಂದೂಗಳಿಗೆ ಇರುವುದು ಒಂದೇ ದೇಶ. ಅಂದಿನ ಕಾಲದಲ್ಲಿ ದೇವರನ್ನು ಪೂಜಿಸಲು ಕಷ್ಟ ಪಡುವಂತಹ ವಾತಾವರಣವಿತ್ತು. ಬಾಲ್ಯದಿಂದ ಶಿವಾಜಿ ಅವರಿಗೆ ತಾಯಿ ಧೀರ ವೀರರ ಕಥೆಗಳನ್ನು ಹೇಳಿಕೊಂಡು ಬೆಳೆಸಿದರು. ಶಿವಾಜಿಗೆ ಧರ್ಮದ ಬಗ್ಗೆ ಸ್ಪಷ್ಟವಾದ ನಿಲುವು ಇತ್ತು ಎಂದರು.

Advertisement

ಒಂದು ಸಮುದಾಯದ ಸಂಘಟನೆ ತುಂಬ ಕಷ್ಟ. ಕ್ಷತ್ರೀಯ ಮರಾಠಾ ಪರಿಷತ್‌ ಇಂದು ಚಿತ್ರದುರ್ಗದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿ ಮರಾಠಾ ಸಮುದಾಯದ ಸಂಘಟನೆ ಮುಂದಾಗಿದೆ ಇದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ರಾಜ್ಯ ಕ್ಷತ್ರಿಯ ಮರಾಠಾ ಪರಿಷತ್‌ ಗೌರ್ನಿಂಗ್‌ ಕೌನ್ಸಿಲ್ ಛೇರ್ಮನ್‌ ರಾಣೋಜಿರಾವ್‌ ಸಾಠೆ ಮಾತನಾಡಿ, ಮರಾಠಾ ಸಮಾಜವನ್ನು 3-ಬಿ ಮೀಸಲಾತಿಯಿಂದ 2-ಎ ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಮರಾಠಾ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಬೇಕು ಶಿವಾಜಿ ಹೆಸರಿನಲ್ಲಿ ನಾವೆಲ್ಲ ಸಂಘಟಿತರಾಗುವ ಮೂಲಕ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕಿದೆ. ಜಿಲ್ಲೆಯ ಸಮುದಾಯದವರೆಲ್ಲರೂ ಒಂದೇ ವೇದಿಕೆಯಲ್ಲಿ ಸಂಘಟಿತರಾಗಬೇಕು. ಸಮಾಜದ ಸಂಘಟನೆ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡುವ ಅಗತ್ಯವಿದೆ. ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಗುರುಪೀಠ ಮುಖ್ಯವಾಗಿದೆ. ಪರಿಷತ್‌ನಿಂದ ಈಗಾಗಲೇ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದು, ಬಡ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಸುರೇಶ್‌ ರಾವ್‌ ಸಾಠೆ, ಗೌರವ ಖಜಾಂಚಿ ಟಿ.ಆರ್‌.ವೆಂಕಟರಾವ್‌ ಚವ್ಹಾಣ, ಕೆಕೆಎಂಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಗೋಪಾಲರಾವ್‌ ಜಾಧವ್‌, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‌ ರಾವ್‌ ಜಾಧವ್‌, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾಬಾಯಿ ಗೋಪಾಲರಾವ್‌ ಜಾಧವ್‌, ನಾಗರಾಜ್‌ ಬೇದ್ರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next