ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಾ ಘಟಕವನ್ನು ಚಿತ್ರದುರ್ಗ ವಿಭಾಗ ವ್ಯಾಪ್ತಿಯಿಂದ ತೆಗೆದು ತುಮಕೂರು ವಿಭಾಗ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ.
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವರನ್ನು ಭೇಟಿ ಮಾಡಿ ಶಿರಾ ಘಟಕವನ್ನು ಚಿತ್ರದುರ್ಗದಲ್ಲೇ ಉಳಿಸಿಕೊಳ್ಳುವುದಾಗಿ ಹೇಳಿದ್ದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ಪ್ರಯತ್ನ ಫಲ ನೀಡಿಲ್ಲ. ಶಿರಾ ಘಟಕ ವ್ಯಾಪ್ತಿಯಲ್ಲಿ 79 ಮಾರ್ಗಗಳಿದ್ದು, ಸಾರಿಗೆ ಸಂಸ್ಥೆಯ 82 ಬಸ್‌ಗಳು ನಿತ್ಯ ಕಾರ್ಯಾಚರಣೆ ಮಾಡುತ್ತಿದ್ದವು. ಈ ಎಲ್ಲ ಬಸ್‌ಗಳಿಂದ ಚಿತ್ರದುರ್ಗ ವಿಭಾಗಕ್ಕೆ ನಿತ್ಯ 9.15 ಲಕ್ಷ ರೂ. ಆದಾಯ ಬರುತ್ತಿತ್ತು. ಶಿರಾ ಘಟಕವನ್ನು ತುಮಕೂರು ವಿಭಾಗಕ್ಕೆ ಸೇರಿಸುವ ಸಂಬಂಧ ಜೂನ್ 19 ರಂದು ಕರಾರಸಾ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಚಿತ್ರದುರ್ಗ ವಿಭಾಗದಿಂದ ಶಿರಾ ಘಟಕ ಕೈತಪ್ಪಿ ಹೋಗಿದೆ.
Related Articles
Advertisement
ಶಿರಾ ಘಟಕ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ, ಯಂತ್ರೋಪಕರಣ, ಘಟಕದ ಸಮಸ್ತ ಚರಾಸ್ತಿ ಮತ್ತು ಸ್ಥಿರಾಸ್ತಿ, ಬಸ್ ನಿಲ್ದಾಣ, ಸಂಚಾರ ನಿಯಂತ್ರಣಾ ಬಿಂದುಗಳನ್ನು ಈ ಕೂಡಲೇ ತುಮಕೂರು ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಲಾಗಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ಕಚೇರಿಯನ್ನು 2017ರ ಮೇ 11 ರಂದು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಅಂದು ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಸಾರಿಗೆ ಬಸ್ ಡಿಪೋಗಳು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಘಟಕಗಳನ್ನು ಚಿತ್ರದುರ್ಗ ವಿಭಾಗಕ್ಕೆ ಸೇರಿಸಿ ವಿಭಾಗವನ್ನು ಆರಂಭಿಸಲಾಗಿತ್ತು. ಈಗ ಸರ್ಕಾರ ಏಕಾಏಕಿ ಶಿರಾ ಘಟಕವನ್ನು ವಾಪಸ್ ಪಡೆದಿರುವುದರಿಂದ ವಿಭಾಗೀಯ ಕಚೇರಿಯನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಶಿರಾ ಘಟಕ ಚಿತ್ರದುರ್ಗ ವಿಭಾಗದಿಂದ ವಾಪಸ್ ಹೋಗುತ್ತಿರುವುದು ಆಡಳಿತ ವೈಫಲ್ಯ ಅಲ್ಲ. ಕೆಎಸ್‌ಆರ್‌ಟಿಸಿ ಅಧ್ಯಕ್ಷರ ಆಸೆಯಂತೆ ಶಿರಾ ಘಟಕ ವರ್ಗಾವಣೆಗೆ ಆದೇಶಿಸಲಾಗಿದೆ. ಮುಂದೆ ಜಿಲ್ಲೆಯಲ್ಲಿ ಬೇರೆ ಡಿಪೋ ಆರಂಭಿಸಿ ವಿಭಾಗ ಉಳಿಸುವ ಕಾರ್ಯ ಮಾಡಲಾಗುತ್ತದೆ.•ಪ್ರಸನ್ನಕುಮಾರ್ ಬಾಲನಾಯ್ಕ, ನಿಯಂತ್ರಣಾಧಿಕಾರಿ, ಚಿತ್ರದುರ್ಗ ವಿಭಾಗ.