Advertisement

ಸ್ವಾತಂತ್ರ್ಯ ಗಾಂಧೀಜಿ ಅಹಿಂಸಾತ್ಮಕ ಹೋರಾಟದ ಫಲ: ಶಿಮುಶ

03:43 PM Aug 07, 2019 | Naveen |

ಚಿತ್ರದುರ್ಗ: ಮಾನವೀಯತೆಯ ತಳಹದಿ ಮೇಲೆ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿಯವರ ಹೋರಾಟದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆಯಿತು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದ ಬಸವ ಕೇಂದ್ರ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ ಹಾಗೂ ಬೃಹನ್ಮಠ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು.

ಭಾರತಕ್ಕೆ ಬ್ರಿಟಿಷರು ಬಂದು ಸಾಮ್ರಾಜ್ಯ ವಿಸ್ತರಣೆ ಮಾಡಿದರು. ಮಹಾತ್ಮ ಗಾಂಧೀಜಿ ಬರುವವರೆಗೂ ಭಾರತ ಪರಕೀಯರ ಕೈವಶದಲ್ಲಿತ್ತು. ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದಿಂದ ಅನೇಕ ಸೇನಾನಿಗಳ ಬಲಿದಾನದ ಮುಖಾಂತರ ಭಾರತ 73 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆಯಿತು ಎಂದರು.

ಗಾಂಧೀಜಿ ಸರ್ವೋದಯಕ್ಕೆ ಒತ್ತು ನೀಡಿದರು. ಸ್ವಾತಂತ್ರ್ಯ ಸಂಗ್ರಾಮ, ಬುದ್ಧನ ಜ್ಞಾನೋದಯ, ಶರಣರ ವಚನೋದಯ ಇವೆಲ್ಲವೂ ಸರ್ವೋದಯಕ್ಕೆ ಆದ್ಯತೆ ನೀಡಿವೆ. ದಾರ್ಶನಿಕರೆಲ್ಲರೂ ಸಮಗ್ರ ಭಾರತ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಯುವಜನರು ಕಲಿಕೆಯ ಗಳಿಕೆಯೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ಪರಾವಲಂಬಿಗಳಾಗಬಾರದು ಎಂದು ಕರೆ ನೀಡಿದರು.

ಬಸವ ಯುಗದಲ್ಲಿ ವೈಚಾರಿಕ ಕ್ರಾಂತಿಯಾದರೆ, ಗಾಂಧಿ ಯುಗ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿತ್ತು. ಬಸವ ಯುಗ ಸಮ ಸಮಾಜಕ್ಕೆ ಪ್ರಯತ್ನಿಸಿದರೆ, ಗಾಂಧಿ ಯುಗ ಸ್ವಾತಂತ್ರ್ಯ ತಂದು ಕೊಟ್ಟಯುಗ ಎಂದು ಬಣ್ಣಿಸಿದರು.

Advertisement

ಹಿಂದೆ ರಾಜ ಮಹಾರಾಜರ ಆಳ್ವಿಕೆಯಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿತ್ತು. ಅದು ಪ್ರಭು ಸತ್ತೆ ಅಥವಾ ರಾಜಸತ್ತೆ. ಆದರೆ ಸಾಮಾಜಿಕ ಸುಧಾರಣೆಗೆ ಮತ್ತು ಸಾಮಾಜಿಕ ಪರಿವರ್ತನೆಗೆ ಅಷ್ಟಾಗಿ ಮಹತ್ವ ನೀಡಿರಲಿಲ್ಲ. 12ನೇ ಶತಮಾನದಲ್ಲಿ ಅರ್ಥ ಸಚಿವರಾಗಿದ್ದ ಬಸವಣ್ಣನವರು ಸಾಮಾಜಿಕ ಬದಲಾವಣೆಯ ಸುಧಾರಣೆಯನ್ನು ತಂದರು. ಇದೊಂದು ಮಹಾ ವೈಚಾರಿಕ ಕ್ರಾಂತಿ ಮತ್ತು ಸಾಮಾಜಿಕ ಸಂಘರ್ಷ ಕ್ರಾಂತಿಯಾಗಿದೆ ಎಂದು ವಿಶ್ಲೇಷಿಸಿದರು.

ಬಸವಾದಿ ಶರಣರೆಲ್ಲರೂ ಸಾಮಾಜಿಕ ಸುಧಾರಣೆ, ಪರಿವರ್ತನೆ, ಸಮಾನತೆ ಮತ್ತು ಜಾತ್ಯತೀತ ಸಮಾಜ ರಚನೆಗೆ ಒತ್ತು ನೀಡಿದರು. ರಾಜಸತ್ತೆ ಮಾಡದ ಕಾರ್ಯವನ್ನು ಶರಣರು ಹಾಗೂ ಸಂತರು ಮಾಡಿದರು. ಆಗ ಭಾರತ ಪರಕೀಯರ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಆದರೆ ಪಂಚ ಭೇದಗಳಾದ ವರ್ಣ ಭೇದ, ವರ್ಗ ಭೇದ, ಜಾತಿ ಭೇದ, ಲಿಂಗ ಭೇದ, ವಯೋ ಭೇದ ಇವುಗಳ ವಿರುದ್ಧ ವಚನಕಾರರು ಹೋರಾಡಿ ಜಯಿಸಿದರು ಎಂದು ಸ್ಮರಿಸಿದರು.

ಕಾನಮಡಗು ಗ್ರಾಮದ ಅಂಧ ಶಿಕ್ಷಕ ಎ. ಸಿದ್ದಪ್ಪ ಅವರನ್ನು ಗೌರವಿಸಲಾಯಿತು. ಕಲಬುರ್ಗಿಯ

ಭಕ್ತಕುಂಬಾರ ಜಾದೂ ಪ್ರದರ್ಶನ ನೀಡಿದರು. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಹಾಗೂ ಶ್ರೀಮಠದ ವಿದ್ಯಾರ್ಥಿಗಳು ಇದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಅಜಿತ್‌ಕುಮಾರ್‌, ತೇಜಸ್ವಿನಿ ಎನ್‌. ಮತ್ತು ದೀಪಾ ಆರ್‌. ನಿರೂಪಿಸಿದರು. ಶ್ರೀಧರ ಗುಪ್ಪಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next