Advertisement

ಬರಕ್ಕಿಂತ ರಜೆಯೇ ಮುಖ್ಯವಾಯ್ತೇ?

12:25 PM Jun 03, 2019 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ತೀವ್ರ ಬರ ಇದ್ದು, ಕುಡಿಯುವ ನೀರು, ಮೇವಿಗಾಗಿ ಜನತೆ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಶನಿವಾರ, ಭಾನುವಾರ ರಜೆ ಇದೆ ಎಂದು ಕೇಂದ್ರ ಸ್ಥಾನದಲ್ಲಿರದೆ ಊರುಗಳಿಗೆ ಹೋಗುತ್ತಿದ್ದಾರೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇಲ್ಲಿನ ಅಂಬಾಭವಾನಿ ದೇವಸ್ಥಾನ ಮುಂಭಾಗದ ಕೆಳಗೋಟೆ ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸಿದ ನಂತರ ಅವರು ಮಾತನಾಡಿದರು.

ಬರ ಇರುವ ಸಂದರ್ಭದಲ್ಲಿ ಅಧಿಕಾರಿಗಳೆಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಆದರೆ ಅಧಿಕಾರಿಗಳು ರಜೆ ಸಂದರ್ಭದಲ್ಲಿ ಒಬ್ಬರೂ ಕೈಗೆ ಸಿಗುವುದಿಲ್ಲ. ಈ ರೀತಿ ಆದರೆ ಜನತೆಗೆ ಹೇಗೆ ನೀರು ನೀಡಬೇಕು ಎಂದು ಪ್ರಶ್ನಿಸಿದರು.

ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅಗತ್ಯ ಇರುವ ಕಡೆಗಳಲ್ಲಿ ಶಾಸಕರ ನಿಧಿಯಿಂದ ಕೊಳವೆಬಾವಿ ಕೊರೆಸಲಾಗಿದೆ. ಆದರೂ ನೀರಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ನಗರದ ಜನತೆ ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಸುವಂತೆ ಬೇಡಿಕೆ ಇಡುತ್ತಿದ್ದಾರೆ. ಒಂದು ಬಡಾವಣೆಗೆ ನೀರಿನ ವ್ಯವಸ್ಥೆ ಆಗಲಿ ಎನ್ನುವ ಉದ್ದೇಶದಿಂದ ಕೊಳವೆಬಾವಿ ಕೊರೆಸಿದರೆ ಆ ಬೀದಿಯವರು ಬೇರೆಯವರಿಗೂ ನೀರು ನೀಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕೆಳಗೋಟೆಯ ಸಾರ್ವಜನಿಕರು ಶಾಸಕರನ್ನು ಜಿಲ್ಲಾ ಬಿಜೆಪಿ ಕಚೇರಿ ಬಳಿ ಭೇಟಿ ಮಾಡಿ, ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಇದ್ದು, ಆದಷ್ಟು ಬೇಗ ಕೊಳವೆಬಾವಿ ಕೊರೆಸಿಕೊಡಬೇಕು, ರಸ್ತೆಗಳು ಕಿತ್ತು ಹೋಗಿವೆ, ಚರಂಡಿ ವ್ಯವಸ್ಥೆ ಹಾಳಾಗಿದೆ. ಕುಡಿಯುವ ನೀರು ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿದರು.

Advertisement

ಜೂ. 3 ರಂದು ಬೆಳಿಗ್ಗೆ 11 ಗಂಟೆಗೆ ಪ್ರವಾಸಿ ಮಂದಿರಕ್ಕೆ ಬನ್ನಿ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸುತ್ತೇನೆ. ನಿಮ್ಮ ಸಮಸ್ಯೆ ಇತ್ಯರ್ಥ ಮಾಡುತ್ತೇನೆಂದು ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿದರು.

ನಗರದ ಗಾಂಧಿ ವೃತ್ತ ಮತ್ತು ಸಂತೆಹೊಂಡ ಸಮೀಪ ಇದ್ದ ಹೂವು ಮತ್ತು ತರಕಾರಿ ಮಾರುಕಟ್ಟೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ವಿಷಯ ನನೆಗುದಿಗೆ ಬಿದ್ದಿದೆ. ಈ ಕಾಮಗಾರಿಗೆ ಏಳೆಂಟು ಕೋಟಿ ರೂ.ಗಳ ಅಗತ್ಯವಿದೆ. ವಿವಿಧ ಯೋಜನೆಗಳ ಅಡಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಮಾಡಲು 5 ಕೋಟಿ ರೂ.ನೀಡಬಹುದು. ಹೆಚ್ಚುವರಿಯಾಗಿ ಮೂರ್‍ನಾಲ್ಕು ಕೋಟಿ ರೂ.ಗಳ ಅಗತ್ಯವಿದೆ. ಇದರ ಮಧ್ಯೆ ಚಳ್ಳಕೆರೆ ಟೋಲ್ಗೇಟ್ ನಿಂದ ಪ್ರವಾಸಿಮಂದಿರದ ತನಕ ಮತ್ತು ಪ್ರವಾಸಿಮಂದಿರದಿಂದ ಗಾಂಧಿ ವೃತ್ತದವರೆಗೆ 19 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣವಾಗುತ್ತಿದೆ. ರಸ್ತೆ ಸಮೀಪ ಇರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಅಂಡರ್‌ ಗ್ರೌಂಡ್‌ ಮೂಲಕ ವಿದ್ಯುತ್‌ ಕೇಬಲ್ ಅಳವಡಿಸಲು ಬೆಸ್ಕಾಂನವರು 2.80 ಕೋಟಿ ರೂ. ಕಟ್ಟಿಸಿಕೊಂಡಿದ್ದಾರೆ. ಅಲ್ಲದೆ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಬಾಕ್ಸ್‌ ಚರಂಡಿ ನಿರ್ಮಾಣಕ್ಕೆ ಐದಾರು ಕೋಟಿ ರೂ.ಗಳ ಅಗತ್ಯವಿದೆ. ಹಾಗಾಗಿ ಇರುವ ಅನುದಾನವನ್ನೆ ಬಳಸಿಕೊಂಡು ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಮುಂದೆ ಯಾವುದಾದರೊಂದು ಯೋಜನೆ ಅಡಿ 8-10 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಕೆಳಗೋಟೆ ನಿವಾಸಿಗಳಾದ ರತ್ನಮ್ಮ, ಅಂಜನಮ್ಮ, ಲಕ್ಷ್ಮಮ್ಮ, ಕಾಂತಮ್ಮ, ತಿಪ್ಪಕ್ಕ, ರೇಖಾ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ಚಿತ್ರದುರ್ಗ ನಗರದ ಜನಸಂಖ್ಯೆ ಹೆಚ್ಚಳವಾಗಿದೆ. ನಗರಕ್ಕೆ ಶಾಂತಿಸಾಗರ ಹಾಗೂ ವಿವಿ ಸಾಗರದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಮಲ್ಲಾಪುರ ಕೆರೆ ಸೇರುತ್ತಿದೆ. ಅಮೂಲ್ಯವಾದ ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು.
•ಜಿ.ಎಚ್. ತಿಪ್ಪಾರೆಡ್ಡಿ,
ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next