Advertisement

11ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ

12:24 PM Jun 08, 2019 | Naveen |

ಚಿತ್ರದುರ್ಗ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜೂ. 11 ರಿಂದ ಆರಂಭವಾಗಲಿದ್ದು, 7503 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷೆ ಬರೆಯುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನೀರಿನ ದಾಹ ಹೆಚ್ಚಾಗಿ ಗಮನ ಕೇಂದ್ರೀಕರಿಸಲಾಗದೆ ತೊಂದರೆ ಅನುಭವಿಸುವಂತಾಗಬಾರದು. ಹೀಗಾಗಿ ಅಗತ್ಯ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಜಿಲ್ಲಾದ್ಯಂತ ಯಾವುದೇ ಅಕ್ರಮ ಚಟುವಟಿಕೆ ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕ್ರಮಬದ್ಧವಾಗಿ ಪರೀಕ್ಷೆ ಯಶಸ್ವಿಗೊಳಿಸಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಗಮನ ವಹಿಸಬೇಕು ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾತನಾಡಿ, ಜಿಲ್ಲೆಯ ಒಟ್ಟು 9 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಕಲಾ ವಿಭಾಗಕ್ಕೆ-3042, ವಿಜ್ಞಾನ ವಿಭಾಗ- 2423, ವಾಣಿಜ್ಯ ವಿಭಾಗ 2038, ಸೇರಿದಂತೆ ಒಟ್ಟು 7503 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿಲ್ಲ. ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ 30 ನಿಮಿಷ ಮುಂಚಿತವಾಗಿ ವಿದ್ಯಾರ್ಥಿಗಳು ಹಾಜರಿರಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್‌ ಅಂಗಡಿ, ಕಂಪ್ಯೂಟರ್‌ ಸೆಂಟರ್‌ಗಳನ್ನು ಮುಚ್ಚಿಸಲಾಗುವುದು. ಅಲ್ಲದೆ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಪರೀಕ್ಷಾ ಕೊಠಡಿಗಳಲ್ಲಿ ಮೇಲ್ವಿಚಾರಕರಾಗಿ ಪ್ರೌಢಶಾಲಾ ಸಹ ಶಿಕ್ಷಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್‌ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

ಪರೀಕ್ಷಾ ವೇಳಾಪಟ್ಟಿ ಹೀಗಿದೆ
ಜೂನ್‌ 11 ರಂದು ಬೆಳಗ್ಗೆ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಹಾಗೂ ಮಧ್ಯಾಹ್ನ ಗೃಹಶಾಸ್ತ್ರ. ಜೂನ್‌ 12 ರಂದು ಬೆಳಗ್ಗೆ ಇಂಗ್ಲಿಷ್‌, ಮಧ್ಯಾಹ್ನ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್‌, ಬ್ಯೂಟಿ ಮತ್ತು ವೆಲ್ನೆಸ್‌. ಜೂನ್‌ 13 ರಂದು ಬೆಳಗ್ಗೆ ಅರ್ಥಶಾಸ್ತ್ರ, ಭೌತಶಾಸ್ತ್ರ, ಮಧ್ಯಾಹ್ನ ಮನಃಶಾಸ್ತ್ರ. ಜೂನ್‌ 14 ರಂದು ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ಸೈನ್ಸ್‌, ಮಧ್ಯಾಹ್ನ ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭಶಾಸ್ತ್ರ. ಜೂನ್‌ 15 ರಂದು ಬೆಳಗ್ಗೆ ಕನ್ನಡ, ಮಧ್ಯಾಹ್ನ ಉರ್ದು, ಸಂಸ್ಕೃತ . ಜೂನ್‌ 17 ರಂದು ಬೆಳಗ್ಗೆ ತರ್ಕಶಾಸ್ತ್ರ, ವ್ಯವಹಾರ ಶಾಸ್ತ್ರ, ರಸಾಯನ ಶಾಸ್ತ್ರ, ಶಿಕ್ಷಣ. ಜೂನ್‌ 18 ರಂದು ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ. ಜೂನ್‌ 19 ರಂದು ಬೆಳಗ್ಗೆ ರಾಜ್ಯಶಾಸ್ತ್ರ, ಬೇಸಿಕ್‌ ಮ್ಯಾಥ್ಸ್. ಜೂನ್‌ 20 ರಂದು ಬೆಳಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್‌, ಫ್ರೆಂಚ್ ವಿಷಯಗಳ ಪರೀಕ್ಷೆ ನಡೆಯಲಿವೆ. ಪರೀಕ್ಷೆ ನಡೆಯವ ನಿಗದಿತ ದಿನದಂದು ಬೆಳಗ್ಗೆ 10:15 ರಿಂದ 1:30ರವರೆಗೆ ಹಾಗೂ ಮಧ್ಯಾಹ್ನ 2:30 ರಿಂದ 5:45 ರವರೆಗೆ ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next