ಚಿತ್ರದುರ್ಗ: ಹಾಯ್ಕಲ್ ಗ್ರಾಮ ಸೇರಿದಂತೆ ಬೆಳಗಟ್ಟ ಗ್ರಾಪಂ ವ್ಯಾಪ್ತಿಗೆ ಸೇರಿದ ವಿವಿಧ ಹಳ್ಳಿಗಳ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹಾಯ್ಕಲ್, ಕೋಟೆಹಟ್ಟಿ, ಚಿನ್ನೂರು ತಿಪ್ಪಯ್ಯನಹಟ್ಟಿ, ಹಾಯ್ಕಲ್ ಗೊಲ್ಲರಹಟ್ಟಿ, ಹಳೆಚೂರಿ ಪಾಪಯ್ಯನಹಟ್ಟಿ, ಹೊಸಚೂರಿ ಪಾಪಯ್ಯನಹಟ್ಟಿಯ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಗ್ರಾಪಂ ವ್ಯಾಪ್ತಿಯಲ್ಲಿ ತೀವ್ರ ತೆರೆನಾದ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಹನಿ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಟ್ಯಾಂಕರ್ ನೀರು ಪೂರೈಕೆ ಸ್ಥಗಿತ ಮಾಡಲಾಗಿದೆ. ನೀರಿನ ನೀಗಿಸುವಂತೆ ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿದರೂ ಉಪಯೋಗವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಾಯ್ಕಲ್ ಗ್ರಾಮದಲ್ಲಿ ಒಂದು ಸಾವಿರ ಮನೆಗಳಿವೆ. 4 ಸಾವಿರಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದು ರೆಡ್ಡಿ, ವಾಲ್ಮೀಕಿ ಸೇರಿದಂತೆ ಮತ್ತಿತರ ಕೂಲಿ ಕಾರ್ಮಿಕರ ವರ್ಗ ಜೀವನ ಕಟ್ಟಿಕೊಂಡಿದೆ. ಹಾಯ್ಕಲ್ ಗ್ರಾಮದಲ್ಲಿ ಲೆಕ್ಕ ಆರು ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಒಂದೊಂದು ಕೊಳವೆ ಬಾವಿಯಲ್ಲಿ ಕಾಲು, ಅರ್ಧ ಇಂಚು ನೀರು ಸ್ವಲ್ಪ ಹೊತ್ತು ಬಂದು ಒಂದೆರಡು ಮನೆಗಳಿಗೆ ಆಗುತ್ತದೆ. ಇಡೀ ಊರು ನೀರಿನ ಸಮಸ್ಯೆಯಲ್ಲಿ ಮುಳುಗೆದ್ದಿದೆ. ಅರ್ಧ ಊರಿಗೆ ಅಲ್ಪಸ್ವಲ್ಪ ನೀರು ಬಿಡಲಾಗುತ್ತಿದೆ. ಉಳಿದಾರ್ಧ ಊರಿನ ನಿವಾಸಿಗಳಿಗೆ ಕಳೆದ ಐದು ವರ್ಷಗಳಿಂದಲೂ ನೀರಿಗೆ ಬರ ಬಂದಿದೆ. ನೀರೇ ಬಿಡುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ ಎಂದು ಹಾಯ್ಕಲ್ ಗ್ರಾಮಸ್ಥರು ಕಿಡಿ ಕಾರಿದರು.
ಮೂರ್ನಾಲ್ಕು ತಿಂಗಳುಗಳಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಬಿಲ್ ಆಗಿಲ್ಲ ಎಂದು ಏಕಾಏಕಿ ಟ್ಯಾಂಕರ್ ನೀರು ನಿಲ್ಲಿಸಿರುವುದರಿಂದ ಐದಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಭೀಕರ ಕ್ಷಾಮ ತಲೆದೋರಿದೆ. ಕೊಳವೆಬಾವಿಗಳಲ್ಲಿಯೂ ನೀರಿ ಬತ್ತಿ ಹೋಗಿರುವುದರಿಂದ ಕಳೆದ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉಲ್ಬಣಿಸಿ ಬಿರುಬೇಸಿಗೆಯ ದಾಹದಿಂದ ತತ್ತರಿಸುವಂತಾಗಿದೆ. ಮೂಕಪ್ರಾಣಿ ಜಾನುವಾರುಗಳು ಪರಿತಪಿಸುತ್ತಿವೆ. ಗ್ರಾ.ಪಂ ವತಿಯಿಂದ ಇದುವರೆವಿಗೂ ನೀರು ಸರಬರಾಜು ಮಾಡಲಾಗುತ್ತಿತ್ತು. ಬಿಲ್ ಪಾವತಿಯಾಗಿಲ್ಲವೆಂದು ಟ್ಯಾಂಕರ್ ಮಾಲೀಕರಗಳು ನೀರು ನಿಲ್ಲಿಸಿರುವುದರಿಂದ ಹತ್ತಾರು ಕಿ.ಮೀ.ದೂರ ಹೋಗಿ ನೀರು ಹೊತ್ತು ತರುವಂತಾಗಿದೆ. ಕೂಡಲೆ ಟ್ಯಾಂಕರ್‌ಗಳ ಮೂಲಕ ನೀರು ನೀಡುವಂತೆ ಪ್ರತಿಭಟನಾನಿರತ ಮಹಿಳೆಯರು ಅಪರ ಜಿಲ್ಲಾಧಿಕಾರಿಯನ್ನು ಕೋರಿದರು.
ಮಹಿಳೆ ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ದಿನವಿಡೀ ನೀರಿಗಾಗಿಯೇ ಪರದಾಡುವಂತಾಗಿದೆ. ಅನೇಕ ಬಾರಿ ಗ್ರಾಪಂಗೆ ಮನವಿ ಮಾಡಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ. ತಕ್ಷಣವೇ ನೀರು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಗ್ರಾಪಂ ಸದಸ್ಯ ಸೂರಯ್ಯ, ಗಂಗಮ್ಮ, ಶೂರ ಪಾಪಯ್ಯ, ಅಶೋಕ್, ಮಹಾಂತೇಶ್, ನಾಗೇಂದ್ರ, ಪಾಲಯ್ಯ, ಮಾರಕ್ಕ, ಗಂಗಮ್ಮ, ಪಾಲಮ್ಮ, ರೇಖಾಮ್ಮ, ಜಯಮ್ಮ, ಪಾಪಮ್ಮ, ಗೀತಮ್ಮ, ಕಲ್ಪನಾ, ರವಿಚಂದ್ರ, ಬೋರಯ್ಯ, ಹರೀಶ್, ಸುರೇಂದ್ರ, ರಾಧಮ್ಮ, ಬೋರಮ್ಮ, ಪಾಪಮ್ಮ, ಮೀನಾಕ್ಷಮ್ಮ ಸೇರಿದಂತೆ ನೂರಾರು ಮಹಿಳೆಯರು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.