ಚಿತ್ರದುರ್ಗ: ಜೋಗಿಮಟ್ಟಿ ಅರಣ್ಯ ವ್ಯಾಪ್ತಿಯ ಗೋಡೆಕಣಿವೆಯಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಬಂಡೀಪುರದ ನಾಗರಹೊಳೆಯಿಂದ ಮತ್ತೆ ಮೂರು ಆನೆಗಳನ್ನು ಕರೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಈಗಾಗಲೇ ಸಕ್ರೆಬೈಲು ಆನೆ ಶಿಬಿರದಿಂದ ಎರಡು ಆನೆಗಳು ಬಂದಿದ್ದು, ಬಂಡೀಪುರದಿಂದ ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಇನ್ನೂ ಮೂರು ಆನೆಗಳು ಬಂದು ಸೇರಲಿವೆ. ಒಟ್ಟು ಐದು ಆನೆಗಳ ಸಹಾಯದಿಂದ ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಒಂದು ವಾರದಿಂದ ಒಂದೇ ಕಡೆ ಬೀಡು ಬಿಟ್ಟಿರುವ ಸಲಗವನ್ನು ಆನೆ ಕಾರಿಡಾರ್ ಮೂಲಕ ಭದ್ರಾ ಅಭಯಾರಣ್ಯದ ಕಡೆ ಕರೆದೊಯ್ಯುವ ಮಾರ್ಗದುದ್ದಕ್ಕೂ ಹಳ್ಳಿಗಳಿವೆ. ಜನರಿಗೆ ತೊಂದರೆಯಾಗುವುದು ಬೇಡ ಎನ್ನುವ ಕಾರಣಕ್ಕೆ ಸೆರೆ ಹಿಡಿಯಲು ತೀರ್ಮಾನಿಸಲಾಗಿದೆ.
ಕಳೆದೊಂದು ವಾರದಿಂದ ಎತ್ತಲೂ ಅಡ್ಡಾಡದೆ ಗೋಡೆಕಣಿವೆ ವ್ಯಾಪ್ತಿಯಲ್ಲೇ ಸೇರಿಕೊಂಡಿರುವ ಒಂಟಿ ಸಲಗ, ಚಿತ್ರದುರ್ಗದ ಅರಣ್ಯ ಇಲಾಖೆ ಹಾಗೂ ಆನೆ, ಬೀಡು ಬಿಟ್ಟಿರುವ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಪೀಕಲಾಟ ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ವೇಳೆಗೆ ಸಕ್ರೆಬೈಲು ಆನೆ ಶಿಬಿರದಿಂದ ಸಾಗರ ಹಾಗೂ ಬಾಲಣ್ಣ ಎಂಬ ಎರಡು ಆನೆಗಳನ್ನು ಕರೆ ತಂದು ಕ್ಯಾಂಪ್ ಮಾಡಲಾಗಿದೆ. ಭಾನುವಾರ ಇಡೀ ದಿನ ವಾಚರ್ಸ್, ಟ್ರ್ಯಾಕರ್ಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿ ಸಲಗ ಇರುವ ಜಾಗ ಪತ್ತೆ
ಮಾಡಲು ಹುಡುಕಾಟ ನಡೆಸಿದರು. ವಾಚರ್ಸ್ ಕಣ್ಣಿಗೆ ಸಲಗ ಗೋಚರವಾಗಿದೆ. ಸೋಮವಾರ ಮತ್ತೆ ಮೂರು ಆನೆಗಳು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಒಟ್ಟು ಐದು ಆನೆಗಳಿಂದ ಒಂಟಿ ಸಲಗದ ಕಾರ್ಯಾಚರಣೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಆರಂಭವಾಗುವ ಸಾಧ್ಯತೆ ಇದೆ.
ಆನೆ ಕಾರ್ಯಾಚರಣೆಗಾಗಿ ಈಗಾಗಲೇ 6 ಮಂದಿ ಟ್ರ್ಯಾಕರ್ಸ್, ಇಬ್ಬರು ವೈದ್ಯರು ಬಂದಿದ್ದಾರೆ. ಭಾನುವಾರ ಅರಣ್ಯ ಇಲಾಖೆ ಬಳ್ಳಾರಿ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ನಿಂಗರಾಜ್ ಕೂಡ ಆಗಮಿಸಿ ಮಾರ್ಗದರ್ಶನ ಮಾಡಿದ್ದಾರೆ.
ರೈತರ ಆತಂಕ: ಈ ವರ್ಷ ಅಪರೂಪಕ್ಕೆ ಒಳ್ಳೆ ಮಳೆಯಾಗಿದ್ದು ಮೆಕ್ಕೆಜೋಳ ಮತ್ತಿತರೆ ಬೆಳೆಗಳು ಹೊಲದಲ್ಲಿವೆ. ಈಗ ಬಂದು ಸೇರಿಕೊಂಡಿರುವ ಆನೆ ಬೆಳೆಗಳನ್ನು ಹಾಳು ಮಾಡುತ್ತಿದೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಇಲ್ಲಿಂದ ಬೇರೆಡೆ ಕಳುಹಿಸಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ.
ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕುರುಮರಡಿಕೆರೆ, ಓಬಣ್ಣನಹಳ್ಳಿ, ನಂದೀಪುರ, ಇಂಗಳದಾಳು, ಕಕ್ಕೆಹರವು ಸೇರಿದಂತೆ ಸುತ್ತಮುತ್ತಲಿನ ರೈತರು ಭಯಭೀತರಾಗಿದ್ದಾರೆ.