ಚಿತ್ರದುರ್ಗ: ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸದಂತೆ ಒಂದು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಅಪಘಾತ ಪ್ರಕರಣಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಧಿಕಾರಿ ವಿನೋತ್ ಪ್ರಿಯಾ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ನಡೆದ ಎರಡು ಸಭೆಗಳಲ್ಲಿ ಅಪಘಾತಗಳ ಹಿನ್ನೆಲೆ ಆಧರಿಸಿ ಅಗತ್ಯ ಸುರಕ್ಷತಾ ಕ್ರಮ ಜರುಗಿಸಲು ಹೆದ್ದಾರಿ ಪ್ರಾಧಿಕಾರದ ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ನಿರ್ದೇಶನವನ್ನು ಪಾಲಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 4 ಹಾಗೂ 50 ಹಾದು ಹೋಗಿವೆ. ಈ ಭಾಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ. ಎನ್‌ಎಚ್ 4ರಲ್ಲಿ ಶಿರಾದಿಂದ ಹಿರಿಯೂರು, ಚಿತ್ರದುರ್ಗ ಮಾರ್ಗದಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಪಘಾತ ಪ್ರದೇಶಗಳಲ್ಲಿ ಸೂಚನಾ ಫಲಕ, ಬ್ಲಿಂಕರ್, ರಿಫ್ಲೆಕ್ಟರ್, ಸಿಸಿ ಕ್ಯಾಮೆರಾ, ಝೀಬ್ರಾ ಕ್ರಾಸ್ ಗುರುತು, ಆ್ಯಂಬುಲೆನ್ಸ್ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇದುವರೆಗೆ ಯಾವ ಸೂಚನೆಯನ್ನೂ ಪಾಲಿಸಿಲ್ಲ. ಅಪಘಾತಗಳಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳನ್ನೂ ಪ್ರಕರಣದ ತಪ್ಪಿತಸ್ಥರನ್ನಾಗಿಸಿ ಕೇಸ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರಿಯೂರಿಗೆ ಪ್ರವೇಶವಾಗುವ ರಸ್ತೆಯಲ್ಲಿ ಡಾಬಾಗೆ ಬರುವ ವಾಹನ ಚಾಲಕರು ಹೆದ್ದಾರಿಯಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಇಲ್ಲಿ ವಾಹನ ನಿಲ್ಲದಂತೆ ನೋಡಿಕೊಳ್ಳಿ ಅಥವಾ ಡಾಬಾ ಸ್ಥಳಾಂತರ ಮಾಡಿ ಎಂದರು.
ಎಲ್ಲಾ ರಾಷ್ಟ್ರೀಯ ಹೆದ್ದಾರಿ ಹಾಗೂ ಚೆಕ್‌ಪೋಸ್ಟ್ ಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಹೆದ್ದಾರಿಯ ಎರಡೂ ತುದಿಗಳಲ್ಲಿ ಪ್ರತಿ 50 ಕಿಮೀ ವ್ಯಾಪ್ತಿಗೆ ಆ್ಯಂಬುಲೆನ್ಸ್ ಸಿಗುವಂತಿರಬೇಕು. ಗ್ರಾಮೀಣ ಪ್ರದೇಶದ ರಸ್ತೆಗಳು ಹೆದ್ದಾರಿಗೆ ನೇರವಾಗಿ ಸಂಪರ್ಕ ಕಲ್ಪಿಸಬಾರದು. ತಿರುವುಗಳಲ್ಲಿ ನಿಮ್ನ ಮಸೂರ (ಕಾನ್‌ಕೇವ್) ಕನ್ನಡಿ ಹಾಕಿದರೆ ಚಾಲಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಡಿವೈಎಸ್ಪಿ ಪಾಂಡುರಂಗ ಮಾತನಾಡಿ, ನಗರದ ಸಮೀಪದ ಉಪಾಧ್ಯ ಹೋಟೆಲ್ ಎದುರು ಅಕ್ರಮವಾಗಿ ಹೆದ್ದಾರಿಯಿಂದ ಮಾರ್ಗ ಕಲ್ಪಿಸಿಕೊಳ್ಳಲಾಗಿದೆ. ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಗ್ರೀಸಿಂಗ್, ದುರಸ್ತಿ ಮಾಡುತ್ತಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಮುಂದುವರಿಯುತ್ತಿದೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನ ಆಗಿಲ್ಲ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಎಸ್‌ಪಿಗೆ ಸೂಚಿಸಿದರು. ಹೆದ್ದಾರಿ ಪ್ರಾಧಿಕಾರ ಅಪಘಾತ ತಡೆಯುವಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಹಾಗೂ ಕಾರ್ಯವೈಖರಿ ಬಗ್ಗೆ ಪೊಲಿಸ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅ ಧಿಕಾರಿಗಳು ಮುಂದಿನ ಸಭೆಗೆ ಸುರಕ್ಷತಾ ಕ್ರಮದ ವರದಿಯೊಂದಿಗೆ ಹಾಜರಾಗಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಹೆದ್ದಾರಿ ಪ್ರಾಧಿಕಾರದ ನಿರ್ವಹಣಾ ಇಂಜಿನಿಯರ್ ಮಹೇಂದ್ರ, ಕೆಎಸ್‌ಆರ್ ಟಿಸಿ ಡಿಸಿ ವಿಜಯಕುಮಾರ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.