ಚಿತ್ರದುರ್ಗ: ಸಮಾಜದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕಾದರೆ ನಮ್ಮನ್ನು ನಾವು ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡು ಸಾರ್ಥಕ ಬದುಕು ನಡೆಸಲು ಪ್ರಯತ್ನಿಸಬೇಕು ಎಂದು ಹೊಸದುರ್ಗದ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ನರಸೀಪುರ ಗ್ರಾಮದಲ್ಲಿ ನಡೆದ ಬನವರ ಓಂಕಾರಪ್ಪನವರ ಶಿವಗಣಾರಾಧನೆ ಹಾಗೂ ಧಾರ್ಮಿಕ ಸಮ್ಮೇಳನದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಜೀವನದಲ್ಲಿ ಸಮಾಜಕ್ಕೆ ಶ್ರೇಷ್ಠವಾದ ಕೊಡುಗೆ ನೀಡಬೇಕು. ಸಮಾಜಕ್ಕೆ ಸಮರ್ಪಿಸಿಕೊಂಡು ಸಂತೃಪ್ತ ಜೀವನ ನಡೆಸಬೇಕು. ಕಾಣದ ಮತ್ತು ನೋಡದ ಸ್ವರ್ಗ-ನರಕದ ಬಗ್ಗೆ ಚಿಂತಿಸುವುದಕ್ಕಿಂತ ಇರುವಾಗಲೇ ಸ್ವರ್ಗ ಕಾಣಬೇಕಾದರೆ ಸಮಾಜಕ್ಕೆ ಶ್ರೇಷ್ಠವಾದ ಸೇವೆ ಮಾಡಬೇಕು. ಸಮಾಜಸೇವೆ ಮಾಡುವ ವ್ಯಕ್ತಿ ಪ್ರತಿನಿತ್ಯ ಪ್ರತಿಕ್ಷಣ ಸ್ವರ್ಗದ ಅನುಭೂತಿ ಅನುಭವಿಸುತ್ತಾನೆ. ಸಂಕುಚಿತತೆ ಇರುವ ಮಾನವ ದುರಭ್ಯಾಸಗಳ ದಾಸನಾಗುತ್ತಾನೆ. ದುರಾಚಾರಿಗೆ ನರಕ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ನರಕವೆಂಬುದು ಮೇಲೆ ಇಲ್ಲ, ಪ್ರತಿನಿತ್ಯ ಅನುಭವಿಸುವ ತಾಪತ್ರಯವೇ ನರಕ. ಸಮರ್ಪಣೆ ಮತ್ತು ತ್ಯಾಗವೇ ಸ್ವರ್ಗ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ಸತ್ಯ ಅರಿತು ಉತ್ತಮ ಜೀವನ ನಡೆÓಬೇಕು. ಸಮಾಜಕ್ಕೆ ಉತ್ತಮ ಗಾಳಿ ಬೆಳಕು, ಮಳೆ ಬೀಳಲು ಗಿಡ, ಮರ, ಸಸಿಗಳು ಅಗತ್ಯ. ಇಂತಹ ಬೀಜಗಳನ್ನು ಬಿತ್ತುವ ಕೆಲಸ ಮಾಡಿದಾಗ ಸಾಧಕನಾಗುತ್ತಾನೆ. ಬುದ್ಧ, ಬಸವ, ಪೈಗಂಬರ್, ಯೇಸು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕ ಮತ್ತು ಬೌದ್ಧಿಕವಾಗಿ ನಮ್ಮ ಜತೆ ಶಾಶ್ವತವಾಗಿ ಇರುವ ಶ್ರೇಷ್ಠ ಕೆಲಸ ಮಾಡಿದ್ದಾರೆ. ಸಮಾಜಕ್ಕಾಗಿ ಉತ್ತಮ ಕಾಯಕ ಮಾಡಿರುವ ಕಾರಣ ಪ್ರತಿಕ್ಷಣ ಅಂತಹ ಸಾಧಕರನ್ನು ಸ್ಮರಣೆ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಶಿವರಾಜಕುಮಾರ್, ಈಶ್ವರಪ್ಪ, ರುದ್ರಮುನಿ ಸ್ವಾಮೀಜಿ, ಸಂಗಮೇಶ್ವರ ಯುವ ವೇದಿಕೆ ಸದಸ್ಯರು, ನರಸೀಪುರದ ಸುತ್ತಮುತ್ತಲಿನ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.