ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿವೆ. ರೈತರು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಕರೆ ನೀಡಿದರು.
ತಾಲೂಕಿನ ಕುರುಮರಡಿಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಾಖೆಯನ್ನು ರೈತ ಸಂಘದ ನಾಮಫಲಕ ಅನಾವರಣ ಮಾಡುವ ಮೂಲಕ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಬಹುತೇಕರು ಸಂಘಟಿತ ವಲಯವಾಗಿದ್ದು, ರೈತರು ಮಾತ್ರ ಅಸಂಘಟಿತರಾಗಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿ ರೈತನನ್ನು ಅವಲಂಬಿಸಲೇಬೇಕಾಗಿದೆ. ಆದರೆ ದೇಶದಲ್ಲಿ ರೈತನನ್ನು ಕಡೆಗಣಿಸಲಾಗುತ್ತಿದೆ. ಬೇರೆಲ್ಲ ವರ್ಗಗಳು ಸಂಘಟನೆಯ ಮಹತ್ವ ಅರಿತು ಸಂಘಟಿತರಾದರೆ, ರೈತರು ಸಂಘಟನೆಯ ಮಹತ್ವ ಅರಿಯದಿರುವುದು ದುರಂತ. ಆದ್ದರಿಂದ ಪ್ರತಿಯೊಂದು ಹಳ್ಳಿಯ ರೈತರು ಒಗ್ಗೂಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಜಿಲ್ಲಾಧಿಕಾರಿಗಳು ರೈತರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸದೆ ರೈತರನ್ನು ಕೀಳಾಗಿ ಕಾಉತ್ತಾರೆ. ರೈತರು ಬಿತ್ತನೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದ ದಿನವೇ ದೇಶ ಸಂಪೂರ್ಣ ವಿನಾಶ ಹೊಂದಲಿದೆ ಎಂದು ಎಚ್ಚರಿಸಿದರು.
ಬರಗಾಲದಲ್ಲಿಯೂ ವಿಮಾ ಕಂಪನಿಗಳು ಇದುವರೆಗೂ ವಿಮಾ ಪರಿಹಾರ ಮೊತ್ತವನ್ನು ರೈತರ ಖಾತೆಗೆ ತಲುಪಿಸಿಲ್ಲ. ಇದನ್ನು ಕೇಳಲು ಹೋದರೆ ಸರ್ಕಾರದ ಮುಖವಾಣಿಯಾಗಬೇಕಿದ್ದ ಜಿಲ್ಲಾಧಿಕಾರಿಗಳು ನಮ್ಮ ಆಹವಾಲು ಕೇಳಿಸಿಕೊಳ್ಳಲು ತಯಾರಿಲ್ಲ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಖಾತೆಗೆ ಇನ್‌ಪುಟ್ ಸಬ್ಸಿಡಿ, ಬೆಳೆ ಪರಿಹಾರ ಮತ್ತು ಫಸಲ್ ಬಿಮಾ ಯೋಜನೆಯ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ ಮಾತನಾಡಿ, ಜಿಲ್ಲೆ ಕಳೆದ ಎಂಟು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ. ರೈತರ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸರ್ಕಾರ ಕೂಡಲೇ ಅವುಗಳ ಸರ್ವೆ ಮಾಡಿಸಿ ಸೂಕ್ತ ಬೆಳೆ ಹಾನಿ ಪರಿಹಾರ ಕೊಡಲೇಬೇಕು. ಇಂತಹ ಕಠಿಣ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕೆಂದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ, ಕೋಶಾಧ್ಯಕ್ಷ ಸಿ.ಆರ್. ತಿಮ್ಮಣ್ಣ, ಹಸಿರುಸೇನೆ ಸಂಚಾಲಕ ಹಂಪಯ್ಯನಮಾಳಿಗೆ ಧನಂಜಯ, ಮುದ್ದಾಪುರ ಸಿ. ನಾಗರಾಜ್, ಹುಣಸೇಕಟ್ಟೆ ಕಾಂತರಾಜ್, ಸಜ್ಜನಕೆರೆ ರೇವಣ್ಣ, ಜೆ.ಎನ್. ಕೋಟೆ ನಿಂಗಪ್ಪ, ಸಜ್ಜನಕೆರೆ ನಾಗರಾಜ ಇದ್ದರು. ಗ್ರಾಮದ ಹಿರಿಯ ರೈತ ಸತ್ಯನಾರಾಯಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.