ಭರಮಸಾಗರ: (ಚಿತ್ರದುರ್ಗ) ರಾಷ್ಟ್ರೀಯ ಹೆದ್ದಾರಿ 44 ರ ಸನಿಹದ ಕಾತ್ರಾಳು ಬಳ್ಳೇಕಟ್ಟೆ ಕೆರೆ ಗುರುವಾರ ಮುಂಜಾನೆ ಕೊಡಿ ಬಿದ್ದು ಅಪಾರ ಪ್ರಮಾಣದ ನೀರು ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆ ಕಡೆಗೆ ಹರಿಯುತ್ತಿದೆ.
ಕೆರೆ ಕೊಡಿ ಬೀಳಲು ಭರಮಸಾಗರ ಏತ ನೀರಾವರಿ ಯೋಜನೆಯಿಂದ ಹರಿಸಲಾದ ಅಪಾರ ಪ್ರಮಾಣದ ನೀರಿನ ಜೊತೆಗೆ ಬುಧವಾರ ಸುರಿದ ಮಳೆ ನೀರು ಸೇರಿ ಕೆರೆ ಕೊಡಿ ಬಿದ್ದಿದೆ.
ಕಳೆದ ಒಂದೆರಡು ತಿಂಗಳಿಂದ ಭರಮಸಾಗರ ದೊಡ್ಡಕೆರೆಯಿಂದ ತುಂಗಭದ್ರಾ ನದಿ ನೀರನ್ನು ಸತತವಾಗಿ ಹರಿಸಲಾಗಿತ್ತು. ಇದರಿಂದ ಕೆರೆಯ ಪ್ರಮುಖ ಭಾಗ ತುಂಬಿ ಹೆದ್ದಾರಿ ರಸ್ತೆಯ ಇನ್ನೊಂದು ಬದಿಯ ಕೆರೆಯ ಅಂಗಳವನ್ನು ಆವರಿಸಿತ್ತು. ಇನ್ನೇನು ಏತ ನೀರಾವರಿಯ ನೀರಿನಿಂದಲೇ ಕೆರೆ ಕೊಡಿ ಬಿತ್ತು ಎನ್ನುವ ವೇಳೆಗೆ ಕಳೆದ ಎರಡು ದಿನಗಳಿಂದ ಸೈಕ್ಲೋನ್ ಮಳೆಯಿಂದಾಗಿ ಕೆರೆ ಪಾತ್ರದ ಹಳ್ಳಿಗಳಲ್ಲಿ ಉತ್ತಮ ಮಳೆ ಆಗಿದ್ದರಿಂದ ಕೆರೆ ಕೊಡಿ ಬಿದ್ದಿದೆ.
ಪ್ರಸಕ್ತ ವರ್ಷದ ಮಳೆಗಾಲದಲ್ಲಿ ಕೆರೆಗೆ ಹೇಳಿಕೊಳ್ಳುವಷ್ಟು ನೀರು ಬಂದಿರಲಿಲ್ಲ. ಏತ ನೀರಾವರಿ ನೀರಿನಿಂದ ಕಳೆದ ಎರಡು ತಿಂಗಳಿಂದ ಕೆರೆ ಕಂಗೊಳಿಸುತ್ತಿತ್ತು. ಇದೀಗ ಕೊಡಿ ಬಿದ್ದ ಹಿನ್ನೆಲೆಯಲ್ಲಿ ಮೈದುಂಬಿದ ಕೆರೆ ವೀಕ್ಷಣೆಗೆ ಬಳ್ಳೇಕಟ್ಟೆ, ಬೀರಾವರ, ಲಕ್ಷ್ಮೀ ಸಾಗರ, ತಿಮ್ಮಪ್ಪನಹಳ್ಳಿ, ವಡ್ಡನಹಳ್ಳಿ, ಬಳಿಗಟ್ಟೆ, ಸಿದ್ದಯ್ಯನಕೋಟೆ, ಮಾರಘಟ್ಟ, ಸಾದರಹಳ್ಳಿ, ವಿಜಾಪುರ ಜನರು ಕೆರೆ ಕಡೆ ದಾವಿಸುತ್ತಿದ್ದಾರೆ.
ಒಂದೆಡೆ ಬರದ ಕೆನ್ನಾಲಿಗೆಗೆ ಸಿಕ್ಕು ಮೂರಬಟ್ಟೆ ಆಗಿರುವ ಅನ್ನದಾತನ ಪಾಲಿಗೆ ಕೆರೆ ಕೊಡಿ ಬಿದ್ದಿರುವ ಸಂಗತಿ ಒಂದಷ್ಟು ಸಂತಸವನ್ನಂತು ಮೂಡಿಸಿದೆ.
ಇದನ್ನೂ ಓದಿ: Meg Lanning; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಘೋಷಿಸಿದ ಆಸೀಸ್ ನಾಯಕಿ