Advertisement

ಆರೋಗ್ಯಕರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಿ

12:13 PM Jul 15, 2019 | Team Udayavani |

ಚಿತ್ರದುರ್ಗ: ಅಭಿವೃದ್ಧಿ ಇಲ್ಲದ ಅಧ್ಯಾತ್ಮ, ಅಧ್ಯಾತ್ಮವಿಲ್ಲದ ಅಭಿವೃದ್ಧಿ ಎರಡೂ ಆರೋಗ್ಯಕರವಲ್ಲ, ಅನಾರೋಗ್ಯಕರ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ಬಸವಕೇಂದ್ರ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರ ಪುಸ್ತಕೋತ್ಸವದಲ್ಲಿ 20 ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬುದ್ಧ, ಅಂಬೇಡ್ಕರ್‌, ಬಸವಣ್ಣ ಅವರ ಸಂದೇಶಗಳು ಬಹಳ ಪ್ರಭಾವ ಬೀರಿದ್ದರ ಪರಿಣಾಮ 20ನೇ ವಯಸ್ಸಿನಲ್ಲಿ 1980ರಿಂದಲೇ ದಿನಚರಿ ಬರೆಯಲು ಆರಂಭಿಸಿದೆ. ಆಗ ನನಗೆ ಡೈರಿ ಖರೀದಿಸಿ ಬರೆಯಲು ಹಣವಿರಲಿಲ್ಲ. ಈ ಸಂದರ್ಭದಲ್ಲಿ ಪುಟ್ಟ ಪಾಕೆಟ್ ಡೈರಿ ಬಳಸಿದೆ. ಅಂದಿನಿಂದ ಈವರೆಗೂ ನನ್ನ ಅನುಭವಗಳನ್ನು ದಿನಚರಿಯಲ್ಲಿ ದಾಖಲಿಸಿದ್ದೇನೆ. ಆ ಕಾರಣದಿಂದಲೇ ಇಂದು ಏಕಕಾಲಕ್ಕೆ 20 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಸಾಧ್ಯವಾಗಿದೆ. ನನ್ನೆಲ್ಲ ಅನುಭವ ಮತ್ತು ಪ್ರಯೋಗಗಳು ಈ ಪುಸ್ತಕಗಳಲ್ಲಿ ದಾಖಲಾಗಿವೆ ಎಂದು ಶರಣರು ಹೇಳಿದರು.

ಅಧ್ಯಾತ್ಮದ ಹೆಸರಿನಲ್ಲಿ ಕೇವಲ ಭಜನೆ ಮಾಡಿದರೆ ಸಾಲದು. ಬದಲಾಗಿ ಆರೋಗ್ಯಕರ ಅಭಿವೃದ್ಧಿ ಕಾರ್ಯಗಳನ್ನು ಮಠಗಳು ಕೈಗೆತ್ತಿಕೊಳ್ಳಬೇಕು. ಮಠಗಳು ಇರುವುದು ಜನರಿಗಾಗಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾಯಕಗಳನ್ನು ಕೈಗೆತ್ತಿಕೊಳ್ಳಬೇಕು. ಸ್ವಾಮೀಜಿಗಳು ಅಂತರ್ಮುಖೀಯಾಗುವುದರ ಜೊತೆಗೆ ಪ್ರಯೋಗಶೀಲರಾಗಿಯೂ ಕಾರ್ಯಪ್ರವೃತ್ತ ರಾಗಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಠಗಳೇ ಶಿಕ್ಷಣ ಒದಗಿಸುತ್ತಿವೆ. ಮಠಾಧೀಶರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಕೀಳರಿಮೆ ಮೂಡುತ್ತಿದೆ ಎಂದರು.

ಜನರು ಸಂಸ್ಕ ೃತದಲ್ಲಿಯೇ ಪ್ರಾರ್ಥನೆ ಮಾಡಬೇಕೆಂದಿಲ್ಲ. ನಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಾರ್ಥನೆ ಮಾಡಬಹುದು. ಕರ್ನಾಟಕದಲ್ಲಿ ಭಕ್ತಿ ಪಂಥದ ಕ್ರಾಂತಿ ವಿಶಿಷ್ಟವಾಗಿ ನಡೆದಿದ್ದು ಮಠಗಳಿಂದ. ನಮ್ಮದು ಗೊಡ್ಡು ಪುರಾಣ ಎಂಬ ಮನೋಭಾವ ಮೂಡಲು ಪ್ರಮುಖ ಕಾರಣ ಇಂಗ್ಲಿಷ್‌ ಕಲಿಕೆ. ನಮ್ಮತನವನ್ನು ಬಿಟ್ಟು ಅನ್ಯರ ದಾಸರಾಗುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮತ್ತೆ ವಿದೇಶಿಗರ ಗುಲಾಮರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಸ.ಚಿ. ರಮೇಶ್‌ ಮಾತನಾಡಿ, ಶರಣರ ಬರಹಗಳು ಪ್ರಸ್ತುತ ಮತ್ತು ವಿಶ್ವಾಸಾರ್ಹವಾಗಿವೆ. ಬಸವಣ್ಣನವರ ಚಿಂತನೆಯ ಮುಂದುವರೆದ ಭಾಗವಾಗಿದ್ದು, ಧಾರ್ಮಿಕ ಜ್ಞಾನ ಜನರಿಗೆ ತಿಳಿಸುವ ಕಾಯಕವಾಗಿದೆ ಎಂದರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬೈರಮಂಗಲ ರಾಮೇಗೌಡ ಮಾತನಾಡಿ, ದಾರಿ ತಪ್ಪಿದ ರಾಜಕಾರಣ ಮತ್ತು ಧರ್ಮಗಳನ್ನು ಸರಿದಾರಿಗೆ ತರುವ ಶಕ್ತಿ ಸಾಹಿತ್ಯಕ್ಕಿದೆ. ಅಂತಹ ಸಾಹಿತ್ಯದ ಪರಿಚಯವನ್ನು ಡಾ| ಶಿವಮೂರ್ತಿ ಮುರುಘಾ ಶರಣರು ಈ 20 ಪುಸ್ತಕಗಳಲ್ಲಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್‌, ಅಂಕಣಕಾರ ಪದ್ಮರಾಜ ದಂಡಾವತಿ, ಡಾ| ಮಹೇಶ್‌ ಜೋಶಿ, ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯಡದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯಾನಿರ್ವಹಣಾ ನಿರ್ದೇಶಕ ಡಾ| ಜಿ.ಎನ್‌.ಮಲ್ಲಿಕಾರ್ಜುನಪ್ಪ, ಡಾ| ಈ. ಚಿತ್ರಶೇಖರ್‌, ಕಾರ್ಯಾನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಮಲ್ಲಿಕಾರ್ಜುನ ಇದ್ದರು.

ಡಾ| ಶಿವಮೂರ್ತಿ ಮುರುಘಾ ಶರಣರು ಇದೂವರೆಗೂ ರಚಿಸಿರುವ 83ಕ್ಕೂ ಹೆಚ್ಚು ಕೃತಿಗಳ ಮುಖಪುಟಗಳ ವಿಶೇಷ ಪ್ರದರ್ಶನ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next