Advertisement

ಮದಕರಿ ನಾಯಕರ ಕೊಡುಗೆ ದೊಡ್ಡದು

12:43 PM May 16, 2019 | Naveen |

ಚಿತ್ರದುರ್ಗ: ಮದಕರಿ ನಾಯಕರು ಕೆರೆ, ಕಟ್ಟೆ, ಮಠ, ಮಂದಿರಗಳನ್ನು ನಿರ್ಮಿಸುವ ಮೂಲಕ ಸಮಾಜಮುಖೀ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ರಾಜಾ ವೀರ ಮದಕರಿ ನಾಯಕರ 237ನೇ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಹಳೆ ನಗರಸಭೆ ಮುಂಭಾಗದಲ್ಲಿರುವ ಮದಕರಿ ನಾಯಕ ವೃತ್ತದಲ್ಲಿರುವ ಮದಕರಿ ನಾಯಕ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

ಮಹಾನ್‌ ನಾಯಕರರನ್ನು ಜಾತಿ-ಧರ್ಮಕ್ಕೆ ಸೀಮಿತಗೊಳಿಸದೆ ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಿಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಯಾವುದೇ ತಂತ್ರಜ್ಞಾನ, ವಿಜ್ಞಾನ ವ್ಯವಸ್ಥೆ ಇಲ್ಲದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಲ್ಲು, ಬಂಡೆಗಳನ್ನಿಟ್ಟು ಬೃಹತ್‌ ಕೋಟೆ ನಿರ್ಮಾಣ ಮಾಡಿರುವುದು ಅದ್ಭುತಗಳಲ್ಲಿ ಒಂದು. ಇಂದು ಎಲ್ಲ ರೀತಿಯ ತಂತ್ರಜ್ಞಾನ ಹಾಗೂ ಬೃಹತ್‌ ಯಂತ್ರೋಕರಣಗಳಿದ್ದರೂ ಅಂತಹ ಕೋಟೆ ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವಂತಾಗಿದೆ ಎಂದರು.

ಐತಿಹಾಸಿಕ ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಆಳಿದ ಮದಕರಿ ನಾಯಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲರೂ ಸೇರಿ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಮದಕರಿ ನಾಯಕರ ವಂಶಸ್ಥರು ಚಿತ್ರದುರ್ಗದಲ್ಲೇ ಇದ್ದಾರೆ ಎಂಬುದು ತಿಳಿಯಿತು. ಅವರನ್ನು ಭೇಟಿಯಾಗಿ ಚಿತ್ರದುರ್ಗದ ಕೋಟೆ ಹಾಗೂ ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

Advertisement

ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್‌ ಮಾತನಾಡಿ, ರಾಜ ವೀರ ಮದಕರಿ ನಾಯಕರ 237 ನೇ ಪುಣ್ಯ ಸ್ಮರಣೆಯನ್ನು ಎಲ್ಲ ಸಮುದಾಯದವರು ಸೇರಿ ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಚಿತ್ರದುರ್ಗದ ಕೋಟೆಯನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ನಾಯಕ ಸಮುದಾಯದ ಮುಖಂಡರಾದ ಎಚ್.ಜೆ. ಕೃಷ್ಣಮೂರ್ತಿ, ಡಾ| ಡಿ. ರಾಮಚಂದ್ರ ನಾಯಕ, ರಾಜ ವಂಶಸ್ಥ ರಾಜ ಮದಕರಿ ಜಯಚಂದ್ರ ನಾಯಕ, ಜೆಡಿಎಸ್‌ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಸಾಮಾಜಿಕ ಕಾರ್ಯಕರ್ತ ಎಚ್. ಅಂಜಿನಪ್ಪ, ರೈಲ್ವೆ ಸ್ಟೇಷನ್‌ ಮಂಜುನಾಥ್‌, ಡಾ| ಗುಡದೇಶ್ವರಪ್ಪ, ಕಿರಣ್‌, ಸೋಮೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ. ಜಗದೀಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಡಿ.ಎನ್‌. ಮೈಲಾರಪ್ಪ, ಅಹೋಬಲ ನಾಯಕ, ಎಚ್.ಎಂ.ಎಸ್‌. ನಾಯಕ, ಮರುಳಾರಾಧ್ಯ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ಅಭಿವೃದ್ಧಿಯಾದರೆ ಇಡೀ ಜಿಲ್ಲೆ ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ನಡೆಸಿ ಕೋಟೆಗೆ ಕಾಯಕಲ್ಪ ಒದಗಿಸಬೇಕು. ಹಂಪಿಗೆ ಸಿಕ್ಕ ವಿಶ್ವ ಮಾನ್ಯತೆ ಚಿತ್ರದುರ್ಗದ ಕೋಟೆಗೆ ಸಿಗುವಂತಾಗಬೇಕು.
ಬಿ. ಕಾಂತರಾಜ್‌,
ನಗರಸಭೆ ಮಾಜಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next